ಕಾರವಾರ: ಮಹಿಳೆಯೊಬ್ಬರು ಲೋಕಕಲ್ಯಾಣರ್ಥವಾಗಿ ಮೌನವನ್ನಾಚರಿಸಿ ಆಹಾರ ತ್ಯಜಿಸಿ ಭೂಮಿಯೊಳಗೆ ಸಮಾಧಿ ಸ್ಥಿತಿಯಲ್ಲಿ ತಪಸ್ಸನ್ನಾಚರಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕೆಳಗಿನಕೂಜಳ್ಳಿಯಲ್ಲಿ ನಡೆದಿದೆ.
ಶಾಂತಾಬಾಯಿ ಭಟ್(53) ತಪಸ್ಸನ್ನಾಚರಿಸಿದ ಮಹಿಳೆ. ಕುಮಟಾದ ಶಾಲೆಯೊಂದರಲ್ಲಿ ಕ್ಲರ್ಕ್ ಆಗಿ ಸೇವೆ ಸಲ್ಲಿಸುತಿದ್ದಾರೆ. ಇವರು ತಮ್ಮ ಊರಿನ ಶಾಂತಿಕಾ ಪರಮೇಶ್ವರಿ ದೇವಿಯ ಆದೇಶದಂತೆ ತಮ್ಮ ಸ್ವಗೃಹದಲ್ಲಿ 6*6 ಅಳತೆಯ ಹೊಂಡವನ್ನು ತೆಗೆದು ಕೆಳಭಾಗದಲ್ಲಿ ಎರಡು ದಿನಗಳ ಕಾಲ ಅನ್ನಾಹಾರ ಸೇವಿಸದೇ ಮೌನವನ್ನಾಚರಿಸಿ ತಪಸ್ಸನ್ನು ಆಚರಿಸಿದ್ದಾರೆ.
Advertisement
Advertisement
ಹೊಂಡದ ಮೇಲ್ಭಾಗದಲ್ಲಿ ಮರದ ಹಲಗೆಯನ್ನು ಹಾಕಿ ಉಸಿರಾಡಲು ಚಿಕ್ಕ ಕಿಂಡಿಯನ್ನು ಹೊರತುಪಡಿಸಿ ಮಣ್ಣನ್ನು ಹಾಕಿ ಮುಚ್ಚಲಾಗಿತ್ತು. ನಂತರ ಇಂದು ಮಣ್ಣಿನಿಂದ ಮುಚ್ಚಿದ ಸಮಾಧಿ ಸ್ಥಳವನ್ನ ತೆಗೆದು ಅವರನ್ನು ಹೊರಕ್ಕೆ ತರಲಾಗಿದೆ. ಕಳೆದ ಮೂರು ದಿನಗಳಿಂದ ಅನ್ನಾಹಾರವನ್ನು ತ್ಯಜಿಸಿ ಮೌನವ್ರತವನ್ನ ಮುಂದುವರೆಸಿದ್ದಾರೆ.
Advertisement
ಸಿದ್ಧಿಗಾಗಿ ಮತ್ತು ಲೋಕಾಕಲ್ಯಾಣಕ್ಕಾಗಿ ಜನವರಿ 16 ರಂದು ಬೆಳಗ್ಗೆ 8ಕ್ಕೆ ಭೂಮಿಯ ಗರ್ಭ ಪ್ರವೇಶಿಸಿ ಗುರುವಾರ ಹೊರಬಂದಿದ್ದಾರೆ. ಅವರು ಸ್ವ ಇಚ್ಛೆ ಮೇರೆಗೆ ಶಾಂತಿಕಾ ಪರಮೇಶ್ವರಿ ದೇವಿಯ ಭಕ್ತಿಯಿಂದ ಎಲ್ಲರ ಶಾಂತಿಗಾಗಿ ಈ ವ್ರತ ಮಾಡಿ ಗೆದ್ದು ಬಂದಿದ್ದಾರೆ ಎಂದು ಅಳಿಯ ಮಹೇಶ್ ಅಡಿ ಮತ್ತು ಕುಲ ಪುರೋಹಿತ ವಿನಾಯಕ್ ಜೋಷಿ ತಿಳಿಸಿದ್ದಾರೆ.