Dakshina Kannada
ಮಗುವನ್ನ ಜೊತೆಯಲ್ಲಿರಿಸಿಕೊಂಡೇ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡ ತಾಯಿ- ಫೋಟೋ ವೈರಲ್

ಮಂಗಳೂರು: ನಗರದ ಬೀದಿಗಳಲ್ಲಿ ಕಸ ಎಸೆಯೋರು ಎಸೆಯುತ್ತಲೇ ಇರುತ್ತಾರೆ. ಈ ಕಸದ ಬಗ್ಗೆ ಎಷ್ಟೇ ಜಾಗೃತಿ ನಡೆಸಿದ್ರೂ ಅಷ್ಟೇ ಎಂಬಂತಾಗಿದೆ. ಆದರೆ ಇಲ್ಲೊಬ್ಬರು ತಾಯಿ ತನ್ನ ಮಗುವನ್ನು ಜೊತೆಯಲ್ಲಿ ಇರಿಸಿಕೊಂಡು ಮಂಗಳೂರಿನಲ್ಲಿ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದು ಈಗ ಎಲ್ಲರ ಗಮನ ಸೆಳೆದಿದೆ.
ಮಂಗಳೂರಿನ ರಾಮಕೃಷ್ಣ ಮಠದ ವತಿಯಿಂದ ಪ್ರತಿ ವಾರ ಸ್ವಚ್ಛತಾ ಅಭಿಯಾನ ನಡೆಯುತ್ತಿದೆ. ಈ ವೇಳೆ ಆಸಕ್ತ ಸಾರ್ವಜನಿಕರು, ಕೆಲವು ಸಂಸ್ಥೆಗಳು ಸಹಯೋಗ ನೀಡಿ ಅಭಿಯಾನದಲ್ಲಿ ಪಾಲ್ಗೊಳ್ಳುತ್ತವೆ. ಭಾನುವಾರ ನಡೆದ ಕಾರ್ಯಕ್ರಮದಲ್ಲಿ ತಾಯಿ, ಮಗು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದ ಫೋಟೋ ಈಗ ವೈರಲ್ ಆಗಿದೆ.
ಬೀದಿಯಲ್ಲಿ ಕಸ ಎಸೆಯುವ ಮಂದಿಗೆ ಈ ಮಹಿಳೆ ಮಾದರಿ ಎನ್ನುವಂತೆ ಸಾಮಾಜಿಕ ಜಾಲತಾಣದಲ್ಲಿ ಶೇರ್ ಆಗುತ್ತಿದೆ. ಕಸ ಹೆಕ್ಕುವ ಇರಾದೆ ಇದ್ದರೂ ಜನರ ನಡುವೆ ಕಸ ಹೆಕ್ಕುವುದಕ್ಕೆ ಹಿಂದೆ ಮುಂದೆ ನೋಡುವ ಮಂದಿಗೆ ಈ ತಾಯಿ, ಮಗು ನಿಜಕ್ಕೂ ಮಾದರಿ.
