ರಾಮನಗರ: ನವವಿವಾಹಿತೆಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಮಾಗಡಿ ತಾಲೂಕಿನ ಹಾಲಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮಾಗಡಿ ತಾಲೂಕಿನ ಹಾಲಶೆಟ್ಟಿಹಳ್ಳಿ ಗ್ರಾಮದ ನಿವಾಸಿ ಪೂರ್ಣಿಮಾ (23) ಕೊಲೆಯಾದ ದುರ್ದೈವಿ. ಕಳೆದ ಆರು ತಿಂಗಳ ಹಿಂದೆಯಷ್ಟೇ ಪೂರ್ಣಿಮಾರ ವಿವಾಹ ನಾಗರಾಜ್‍ರೊಂದಿಗೆ ನಡೆದಿತ್ತು. ಮದುವೆ ಬಳಿಕ ಅನ್ಯೋನ್ಯವಾಗಿಯೇ ದಂಪತಿ ಜೀವನ ಸಾಗಿಸುತ್ತಿದ್ದರು ಎಂಬ ಮಾಹಿತಿ ಲಭಿಸಿದೆ.
ಇಂದು ಸಂಜೆ ವೇಳೆ ಪೂರ್ಣಿಮಾ ಕೊಲೆಯಾಗಿದ್ದು, ಘಟನೆ ಬಳಿಕ ಪತಿ ನಾಗರಾಜ್ ನಾಪತ್ತೆಯಾಗಿದ್ದಾನೆ. ಕೊಲೆ ಮಾಡಿದ್ದು ಯಾರು ಹಾಗೂ ಕಾರಣ ಏನೆಂಬುವುದು ತಿಳಿದು ಬಂದಿಲ್ಲ. ಕುಟುಂಬದಲ್ಲಿ ಜಗಳ ನಡೆದು ಪತಿಯೇ ಕೊಲೆ ಮಾಡಿ ಪರಾರಿಯಾಗಿರುವ ಕುರಿತು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಸಂಜೆ ವೇಳೆಗೆ ನಾಗರಾಜ್ ಪೋಷಕರು ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಮಾಗಡಿ ಪೊಲೀಸರು ಭೇಟಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.