ಕಲಬುರಗಿ: ಮಹಿಳೆಯರೇ ಎಚ್ಚರ..ಎಚ್ಚರ..ಎಚ್ಚರ… ಅದರಲ್ಲೂ ಗ್ರಾಮೀಣ ಭಾಗದ ಮಹಿಳೆಯರು ತಮ್ಮ ತಮ್ಮ ಜಮೀನಿನಲ್ಲಿ ಕೆಲಸ ಮಾಡುವ ಮುನ್ನ ಕೊಂಚ ಎಚ್ಚರಿಕೆ ವಹಿಸಿದ್ರೆ ಒಳ್ಳೆಯದು. ಎಚ್ಚರಿಕೆ ಇಲ್ಲದೇ ಜಮೀನಿಗೆ ಹೋದ್ರೆ ನಿಮ್ಮ ಮಾನದ ಜೊತೆಗೆ ಪ್ರಾಣನೂ ಹೋಗುತ್ತೆ.
ಹೌದು. ಕಲಬುರಗಿ ಜಿಲ್ಲೆ ಯಡ್ರಾಮಿ ತಾಲೂಕಿನ ಹರನಾಳ ಗ್ರಾಮದಲ್ಲಿ ಮಹಿಳೆ (Woman) ಯೊಬ್ಬರ ಬರ್ಬರ ಹತ್ಯೆಯಾಗಿದ್ದು, ಅರೆನಗ್ನ ಸ್ಥಿತಿಯಲ್ಲಿ ಬಿದ್ದಿದ್ದರು. ಮಹಿಳೆಯ ಹೆಸರು ಅನುಸೂಯ. ಲೀಜ್ ಮೇಲೆ ಪಡೆದಿದ್ದ ಊರಾಚೇ ಇರೋ ಜಮೀನಿನಲ್ಲಿ ಒಬ್ಬಳೇ ಕೆಲಸ ಮಾಡುತ್ತಿದ್ದಳು. ಈ ವೇಳೆ ದುಷ್ಕರ್ಮಿಗಳು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಅನೂಸೂಯಳನ್ನ ಅತ್ಯಾಚಾರಕ್ಕೆ ಯತ್ನಿಸಿರೋದು ಮೇಲ್ನೋಟಕ್ಕೆ ಕಂಡು ಬಂದಿದೆ. ಅತ್ಯಾಚಾರಕ್ಕೆ ವಿರೋಧ ವ್ಯಕ್ತಪಡಿಸಿದ ಅನೂಸೂಯಳನ್ನ ಕೆಳಗೆ ಕೆಡವಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಲಾಗಿದೆ. ನಂತರ ಅನೂಸೂಯ ಮೈಮೇಲಿದ್ದ ಚಿನ್ನಾಭರಣಗಳನ್ನ ದೋಚಿ ಪರಾರಿಯಾಗಿದ್ದಾರೆ. ಇದನ್ನೂ ಓದಿ: ವಿದ್ಯುತ್ ಶಾಕ್ – ತಾಯಿ, ಇಬ್ಬರು ಮಕ್ಕಳು ಸಾವು
ಗ್ರಾಮೀಣ ಭಾಗದಲ್ಲಿ ಮಹಿಳೆಯರು ಯಾವುದೇ ಭಯಭೀತಿವಿಲ್ಲದೇ ಜಮೀನಿನಲ್ಲಿ ಕೆಲಸಗಳನ್ನ ಮಾಡಲು ಒಬ್ಬಂಟಿಯಾಗಿಯೇ ಹೋಗುತ್ತಾರೆ. ಆದರೆ ಹರನಾಳ ಗ್ರಾಮದಲ್ಲಿ ನಡೆದ ಮಹಿಳೆಯ ಬರ್ಬರ ಹತ್ಯೆಯಿಂದ ಗ್ರಾಮಸ್ಥರಲ್ಲದೇ ಇಡೀ ಜಿಲ್ಲೆಯೇ ಬೆಚ್ಚಿಬಿದ್ದಿದೆ. ಅನುಸೂಯಳನ್ನ ಪತಿ ಬಿಟ್ಟು ಹಲವು ವರ್ಷಗಳೆ ಕಳೆದಿದೆ. ಜಮೀನಿಗೆ ಹೋದ ಅನುಸೂಯ ರಾತ್ರಿಯಾದ್ರೂ ಮನೆಗೆ ವಾಪಸ್ ಬಂದಿಲ್ಲ. ಹೀಗಾಗಿ ಮನೆಯವರು ಜಮೀನಿಗೆ ಹೋಗಿ ನೋಡಿದಾಗ ಅನುಸೂಯ ಅರೆನಗ್ನ ಸ್ಥಿತಿಯಲ್ಲೇ ಬರ್ಬರವಾಗಿ ಹತ್ಯೆಯಾಗಿ ಬಿದ್ದಿದ್ದನ್ನ ಕಂಡು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಯಡ್ರಾಮಿ ಠಾಣೆ (Yadrami Police Station) ಪೊಲೀಸರು ಸ್ಥಳ ಪರಿಶೀಲನೆ ಮಾಡಿ ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಕಲಬುರಗಿ ಜಿಲ್ಲಾಸ್ಪತ್ರೆಗೆ ರವಾನಿಸಿ ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಒಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ಮಹಿಳೆಯರು ಒಬ್ಬಂಟಿಯಾಗಿ ಜಮೀನಿಗೆ ಹೋಗುವಾಗ ಕೊಂಚ ಎಚ್ಚರಿಕೆಯಿಂದ ಇದ್ರೆ ಮಾನದ ಜೊತೆಗೆ ಪ್ರಾಣನು ಉಳಿಬಹುದು.