ಕ್ಯಾರಕಾಸ್: ಟೈಟ್ ಜೀನ್ಸ್ ಒಂದನ್ನು ಹಾಕೋದೇ ಕಷ್ಟದ ಕೆಲಸ. ಆದರೆ ಇಲ್ಲೊಬ್ಬಳು ಯುವತಿ ಒಂದರಮೇಲೊಂದರಂತೆ ಬರೋಬ್ಬರಿ 8 ಜೀನ್ಸ್ ಗಳನ್ನು ಧರಿಸಿ ಸಿಕ್ಕಿಬಿದ್ದ ಘಟನೆ ವೆನೆಜುವೆಲಾ ದೇಶದಲ್ಲಿ ನಡೆದಿದೆ.
ಹೌದು. ಅಪರಿಚಿತ ಯುವತಿಯೊಬ್ಬಳು ಬಾತ್ ರೂಮಿನಲ್ಲಿ ತಾನು ಧರಿಸಿದ್ದ ಎಲ್ಲಾ ಜೀನ್ಸ್ ಗಳನ್ನು ತೆಗೆದಿದ್ದಾಳೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಯುವತಿ ಮಾಲ್ ನಲ್ಲಿ ಕದ್ದು ಒಂದರ ಮೇಲೊಂದರಂತೆ 8 ಜೀನ್ಸ್ ಗಳನ್ನು ಧರಿಸಿ ಎಸ್ಕೇಪ್ ಆಗಲು ಯತ್ನಿಸಿದ್ದಾಳೆ. ಈ ವೇಳೆ ಮಾಲ್ ಸಿಬ್ಬಂದಿ ಆಕೆಯನ್ನು ಗಮನಿಸಿ ಅನುಮಾನಗೊಂಡು ಬಾತ್ ರೂಮಿಗೆ ಕರೆದುಕೊಂಡು ಹೋಗಿದ್ದಾರೆ. ಆಗ ಯುವತಿಯ ಕಳ್ಳತನದ ಗುಟ್ಟು ರಟ್ಟಾಗಿದೆ. ಹೀಗಾಗಿ ಜೀನ್ಸ್ ಬಿಚ್ಚಲು ಹೇಳಿದ್ದು, ಯುವತಿ ಧರಿಸಿದ್ದ ಪ್ಯಾಂಟ್ ಗಳ ಲೆಕ್ಕ ನೋಡಿ ಸಿಬ್ಬಂದಿಯೇ ದಂಗಾಗಿ ಹೋಗಿದ್ದಾರೆ.
ಈ ದೃಶ್ಯವನ್ನು ಸಿಬ್ಬಂದಿ ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಸಖತ್ತಾಗಿ ವೈರಲ್ ಆಗುತ್ತಿದೆ. ಅಲ್ಲದೆ ಸಾಕಷ್ಟು ಕಮೆಂಟ್ ಗಳು ಬರುತ್ತಿವೆ. ಕೆಲವರು ಯುವತಿಯ ಪ್ರತಿಭೆಗೆ ಬೆರಾಗಿದ್ದಾರೆ. ನಾನು ಆಕೆಯ ಪ್ರತಿಭೆಯಿಂದ ಪ್ರಭಾವಿತಳಾಗಿದ್ದೇನೆ. ಒಂದಲ್ಲ ಹಲವು ಜೀನ್ಸ್ ಗಳನ್ನು ಆಕೆ ಧರಿಸಿರುವುದನ್ನು ನೋಡಿದ್ರೆ ನಿಜಕ್ಕೂ ಅಚ್ಚರಿಯಾಗುತ್ತಿದೆ ಒಬ್ಬರು ಕಮೆಂಟ್ ಮಾಡಿದ್ರೆ, ಮತ್ತೆ ಕೆಲವರು ಅಷ್ಟು ಜೀನ್ಸ್ ಧರಿಸಿದ ಅವಳಿಗೆ ಏನೂ ಅನಿಸಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಇನ್ನೂ ಕೆಲವರು ಆಕೆ ಜಾದುಗಾರ್ತಿಯಾಗಿರಬೇಕು. ಒಂದು ಪ್ಯಾಂಟ್ ಹಾಕೋಕೆ ಕಷ್ಟ ಆಗುತ್ತದೆ. ಅಂಥದ್ರಲ್ಲಿ ಇವಳು ಹೇಗೆ 8 ಪ್ಯಾಟ್ ಧರಿಸಿದ್ದಾಳೆ ಎಂದು ಶಾಕ್ ಆಗಿದ್ದಾರೆ.