ಬಾಗಲಕೋಟೆ: ಖಾಸಗಿ ಆಸ್ಪತ್ರೆ ವೈದ್ಯೆಯ ಎಡವಟ್ಟಿನಿಂದಾಗಿ 5 ತಿಂಗಳ ಗರ್ಭಿಣಿ ಕೈ ಕಳೆದುಕೊಂಡಿರುವ ಘಟನೆ ಜಿಲ್ಲೆಯ ಇಳಕಲ್ ನಲ್ಲಿ ನಡೆದಿದೆ.
ಶಿಲ್ಪಾ ಭಂಜತ್ರಿ (26) ಬಲಗೈ ಕಳೆದುಕೊಂಡ ಗರ್ಭಿಣಿ. ಶಿಲ್ಪಾವರು ಹುನಗುಂದ ತಾಲೂಕಿನ ಚಿಕ್ಕಕೊಡಗಲಿ ಗ್ರಾಮ ನಿವಾಸಿಯಾಗಿದ್ದು, ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಳಕಲ್‍ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಖಾಸಗಿ ಆಸ್ಪತ್ರೆಯ ವೈದ್ಯರು ಮಾಡಿದ ಎಡವಟ್ಟಿನಿಂದಾಗಿ ತಮ್ಮ ಬಲಗೈಯನ್ನೇ ಕಳೆದುಕೊಂಡಿದ್ದಾರೆ.
Advertisement
ಸಂಜೀವಿನಿ ಶಾವಿ ಆಸ್ಪತ್ರೆಯ ವಿರುದ್ಧ ಗರ್ಭಿಣಿಯ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದು, ವೈದ್ಯೆ ಶೋಭಾ ಶಾವಿಯವರ ನಿರ್ಲಕ್ಷ್ಯದಿಂದ ಗರ್ಭಿಣಿಯ ಕೈ ಕಟ್ ಆಗಿದೆ ಎಂದು ಆರೋಪಿಸಿ ಇಳಕಲ್ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ.
Advertisement
ಏನಿದು ಘಟನೆ?
ಜೂನ್ 4ರಂದು ಶಿಲ್ಪಾರಿಗೆ ತೀವ್ರ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಳಕಲ್‍ನ ಸಂಜೀವಿನಿ ಶಾವಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಚಿಕಿತ್ಸೆ ನೀಡಿದ ಡಾಕ್ಟರ್. ಶೋಭಾ ಶಾವಿಯವರು ಬಲಗೈಲಿರುವ ಗುಳ್ಳೆಯಿಂದ ಜ್ವರ ಕಾಣಿಸಿಕೊಂಡಿದೆ ಎಂದು ಒಳರೋಗಿಯ ವಿಭಾಗಕ್ಕೆ (ಐಪಿಡಿ) ದಾಖಲಿಸಿಕೊಂಡಿದ್ದಾರೆ.
Advertisement
ವೈದ್ಯೆಯು ಆಪರೇಶನ್ ಮೂಲಕ ಗುಳ್ಳೆಯನ್ನು ತೆಗೆದಿದ್ದು, ಜೂನ್ 6ರಂದು ರಕ್ತ ಕಡಿಮೆಯಿದ್ದ ಹಿನ್ನೆಲೆಯಲ್ಲಿ ಮಹಿಳೆಗೆ ರಕ್ತ ಹಾಕಿ ಜೂನ್ 8ರಂದು ಡಿಸ್ಟಾರ್ಜ್ ಮಾಡಿದ್ದಾರೆ. ಗ್ರಾಮಕ್ಕೆ ತೆರಳಿದ ಸ್ವಲ್ಪ ಸಮಯದಲ್ಲೇ ಆಪರೇಶನ್ ಆದ ಕೈಯಲ್ಲಿ ತೀವ್ರ ನೋವು ಹಾಗೂ ಬಾವು ಕಾಣಿಸಿಕೊಂಡಿದೆ. ಕೂಡಲೇ ಆಸ್ಪತ್ರೆಗೆ ಹೋದಾಗ ವೈದ್ಯೆಯು ಸರಿಯಾದ ಚಿಕಿತ್ಸೆ ನೀಡದೆ ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ.
Advertisement
ನೋವು ಹೆಚ್ಚಾದ ಹಿನ್ನೆಲೆಯಲ್ಲಿ ಬಾಗಲಕೋಟೆಯ ಮತ್ತೊಂದು ಖಾಸಗಿ ಆಸ್ಪತ್ರೆಗೆ ಗರ್ಭಿಣಿಯನ್ನು ದಾಖಲಿಸಿದ್ದಾರೆ. ಪರೀಕ್ಷೆ ನಡೆಸಿದ ವೈದ್ಯರು ಬಲಗೈಯಲ್ಲಿ ಆಪರೇಶನ್ ಮಾಡಿದ ಸ್ಥಳದಲ್ಲಿ ಸೋಂಕು ತಗುಲಿ ಗ್ಯಾಂಗ್ರೀನ್ ಆಗಿದ್ದು, ಕೂಡಲೇ ಮೊಣಕೈವರೆಗೆ ಕೈ ಕತ್ತರಿಸಬೇಕು, ಇಲ್ಲವೇ ಮಹಿಳೆಯ ಜೀವಕ್ಕೆ ಆಪತ್ತು ಎಂದಾಗ ಅನಿವಾರ್ಯವಾಗಿ ಮಹಿಳೆಯ ಬಲಗೈಯನ್ನು ಮೊಣಕೈವರೆಗೆ ಕತ್ತರಿಸಿದ್ದಾರೆ.
ವೈದ್ಯೆಯು ಆಪರೇಶನ್ ಮಾಡಿ ಸರಿಯಾದ ಚಿಕಿತ್ಸೆ ಮಾಡದೇ ಇದ್ದರಿಂದ ಸೋಂಕು ತಗುಲಿದೆ. ಅಲ್ಲದೆ ರಕ್ತ ಹಾಕುವಾಗಲೂ ಗಮನಿಸದೆ ನಿರ್ಲಕ್ಷ್ಯ ತೋರಿದ್ದರಿಂದ ಸೋಂಕು ಗ್ಯಾಂಗ್ರಿನ್ ಆಗಿ ಮಾರ್ಪಟ್ಟಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಸದ್ಯ ಗರ್ಭಿಣಿಯು ಪ್ರಾಣಾಪಾಯದಿಂದ ಪಾರಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.