ಚಂಡೀಗಢ: ಮಗಳ ವಿವಾಹದ ಸಂಭ್ರಮದಲ್ಲಿ ವಧುವಿನ ತಂದೆ ಹಾರಿಸಿದ ಗುಂಡಿಗೆ ನೆರೆಮನೆಯ ಯುವತಿ ಬಲಿಯಾದ ದಾರುಣ ಘಟನೆ ಪಂಜಾಬ್ ನ ಹೋಶಿಯಾರ್ಪುರ್ ನಲ್ಲಿ ನಡೆದಿದೆ.
ಹೋಶಿಯಾರ್ಪುರ್ ನಿವಾಸಿ 22 ವರ್ಷದ ಸಾಕ್ಷಿ ಅರೋರಾ ಮೃತಪಟ್ಟ ದುರ್ದೈವಿ. ಈಕೆ ಜಲಂದರ್ ನ ಕಾಲೇಜೊಂದರಲ್ಲಿ ಎಂಬಿಎ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ. ಹೋಶಿಯಾರ್ಪುರದ ಅಶೋಕ್ ಖೋಸ್ಲಾ ಎಂಬಾತ ತನ್ನ ಮಗಳ ಮದುವೆ ಸಂಭ್ರಮಕ್ಕಾಗಿ ಮನೆಯಲ್ಲಿ ಶನಿವಾರ ಡಿಜೆ ಪಾರ್ಟಿ ಏರ್ಪಡಿಸಿದ್ದರು. ತಡರಾತ್ರಿ 11.30 ಗಂಟೆಯಾದರೂ ಈ ಪಾರ್ಟಿ ನಡೆಯುತ್ತಿದ್ದು, ಸಾಕ್ಷಿ ಅರೋರಾ ತನ್ನ ಮನೆಯ ಮಹಡಿ ಮೇಲೆ ನಿಂತು ನೋಡುತ್ತಿದ್ದಳು.
Advertisement
Advertisement
ಇದೇ ಸಂದರ್ಭದಲ್ಲಿ ವಧುವಿನ ತಂದೆ ಇದ್ದಕ್ಕಿದ್ದಂತೆ ಗುಂಡು ಹಾರಿಸಿದ್ದಾರೆ. ಆ ಗುಂಡು ಸಾಕ್ಷಿ ಅರೋರಾ ಹಣೆಗೆ ಹೊಕ್ಕಿದ್ದು, ಆಕೆ ತಕ್ಷಣ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಮದ್ಯದ ಅಮಲಿನಲ್ಲಿದ್ದ ಅಶೋಕ್ ಖೋಸ್ಲಾ ಹಾಗೂ ಆತನ ಸ್ನೇಹಿತ ಅಶೋಕ್ ಸೇಥಿ ಬಂದೂಕಿನಿಂದ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ನಮ್ಮ ನೆರೆಮನೆಯವರು ಆಯೋಜಿಸಿದ್ದ ಡಿಜೆ ಪಾರ್ಟಿಯನ್ನು ನನ್ನ ಮಗಳು ಟೆರೇಸ್ ಮೇಲೆ ನಿಂತು ನೋಡುತ್ತಿದ್ದಳು. ಇದ್ದಕ್ಕಿದ್ದಂತೆ ಗುಂಡು ಬಂದು ಆಕೆಯ ಹಣೆಗೆ ತಗುಲಿದೆ. ತಕ್ಷಣ ಅವಳು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ ಎಂದು ಮೃತಾಳ ತಂದೆ ಚರಣಿತ್ ಅರೋರಾ ಹೇಳಿದ್ದಾರೆ.
Advertisement
ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅಶೋಕ್ ಖೋಸ್ಲಾನನ್ನು ಬಂಧಿಸಿ ಆತನಿಂದ ಲೈಸೆನ್ಸ್ ಹೊಂದಿದ್ದ 32 ಬೋರ್ ರಿವಾಲ್ವರ್ ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 302(ಕೊಲೆ)ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಡಬ್ಬಲ್ ಬ್ಯಾರೆಲ್ ಗನ್ ನಿಂದ ಗುಂಡು ಹಾರಿಸುತ್ತಿದ್ದ ಆತನ ಸ್ನೇಹಿತ ಅಶೋಕ್ ಸೇಥಿ ಪರಾರಿಯಾಗಿದ್ದು, ಆತನ ಬಂಧನಕ್ಕಾಗಿ ಬಲೆ ಬೀಸಿದ್ದೇವೆ ಎಂದು ಪೊಲೀಸ್ ಅಧಿಕಾರಿ ಜಗ್‍ದೀಶ್ ಹೇಳಿದ್ದಾರೆ.