ಬೆಂಗಳೂರು: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಕೊಂದಿದ್ದ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ.
ಮಹೇಶ್ ಶಿಂಧೆ ಕೊಲೆಯಾದ ಪತಿ. ಪತ್ನಿ ದೀಪಾಲಿ ಮತ್ತು ಪ್ರಿಯಕರ ರಾಜ್‍ಕುಮಾರ್ ಬಂಧಿತ ಆರೋಪಿಗಳು. ಜನವರಿ 8ರಂದು ನಗರದ ಹುಳಿಮಾವು ಮನೆಯಲ್ಲಿ ಮಹೇಶ್ ಶಿಂಧೆ ಕೊಲೆಯಾಗಿತ್ತು. ಅಂದು ಅನುಮಾನಾಸ್ಪದ ಸಾವು ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಪೊಲೀಸ್ ವಿಚಾರಣೆ ವೇಳೆ ದೀಪಾಲಿ ಮತ್ತು ರಾಜ್‍ಕುಮಾರ್ ಇಬ್ಬರು ಸತ್ಯವನ್ನು ಬಾಯಿಬಿಟ್ಟಿದ್ದಾರೆ.
Advertisement
Advertisement
ಜ.8 ಆಗಿದ್ದೇನು?: ಮಹೇಶ್ ಶಿಂಧೆ ನಗರದಲ್ಲಿ ಆಟೋ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದರು. ಮಹೇಶ್ ಪತ್ನಿ ಗಾರ್ಮೆಂಟ್ ನಲ್ಲಿ ಕೆಲಸ ಮಾಡುತ್ತಿದ್ದರು. ಇದೇ ಗಾರ್ಮೆಂಟ್ ನಲ್ಲಿ ಕೆಲಸ ಮಾಡುತ್ತಿದ್ದ ರಾಜ್‍ಕುಮಾರ್ ಎಂಬಾತನೊಂದಿಗೆ ದೀಪಾಲಿ ಅನೈತಿಕ ಸಂಬಂಧ ಹೊಂದಿದ್ದಳು. ಪತಿ ಪ್ರತಿದಿನ ಮನೆಗೆ ತಡವಾಗಿ ಬರ್ತಾರೆಂದು ಹುಳಿಮಾವಿನಲ್ಲಿ ತನ್ನ ಮನೆಗೆ ರಾಜ್‍ಕುಮಾರ್ ನನ್ನು ಕರೆಸಿಕೊಂಡಿದ್ದಾಳೆ. ಆದ್ರೆ ಅಂದು ಮಹೇಶ್ ಸಂಜೆ 7.30ಕ್ಕೆ ಮನೆಗೆ ಆಗಮಿಸಿದ್ದಾರೆ. ಪತಿ ಮನೆಗೆ ಆಗಮಿಸುತ್ತಿದ್ದಂತೆ ರಾಜ್‍ಕುಮಾರ್ ನನ್ನು ಬೆಡ್ ರೂಮಿನ ಮಂಚದ ಕೆಳಗೆ ಬಚ್ಚಿಟ್ಟಿದ್ದಾಳೆ.
Advertisement
ಮಂಚದ ಕೆಳಗೆ ಸಿಕ್ಕ: ರಾಜ್‍ಕುಮಾರ್ ನನ್ನು ಮಂಚದ ಕೆಳಗೆ ಬಚ್ಚಿಟ್ಟು ದೀಪಾಲಿ ಬಾಗಿಲನ್ನು ತೆರೆದಿದ್ದಾಳೆ. ಮನೆಗ ಬಂದ ಮಹೇಶ್‍ಗೆ ಪತ್ನಿ ನಡುವಳಿಕೆಯ ಅನುಮಾನ ಬಂದಿದೆ. ಮನೆಯನ್ನೆಲ್ಲಾ ಹುಡುಕಾಡಿದಾಗ ಮಂಚದ ಕೆಳಗೆ ರಾಜ್‍ಕುಮಾರ್ ಸಿಕ್ಕಿಬಿದ್ದಿದ್ದಾನೆ. ಪತ್ನಿಯ ಅಕ್ರಮ ಸಂಬಂಧ ಬಯಲಾಗುತ್ತಿದ್ದಂತೆ ಮಹೇಶ್ ಇಬ್ಬರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಎಲ್ಲಿ ತಮ್ಮ ಅಕ್ರಮ ಸಂಬಂಧ ಬಯಲಾಗುತ್ತೆ ಎಂಬ ಭಯದಿಂದ ದೀಪಾಲಿ ಮತ್ತು ರಾಜ್‍ಕುಮಾರ್ ಇಬ್ಬರೂ ಸೇರಿಕೊಂಡು ಮಹೇಶ್ ಕುತ್ತಿಗೆಯನ್ನು ಹಿಸುಕಿ ಕೊಲೆ ಮಾಡಿದ್ದಾರೆ. ಕೊಲೆಯ ನಂತರ ಅನುಮಾನಬಾರದಂತೆ ನಿದ್ದೆ ಮಾಡುತ್ತಿರುವಂತೆ ಮಹೇಶ್‍ರನ್ನು ಮಲಗಿಸಿ ರಾಜ್‍ಕುಮಾರ್ ಹೊರಹೋಗಿದ್ದಾನೆ.
Advertisement
ಮಕ್ಕಳಿಗೆ ತಂದೆಗೆ ಹುಷಾರಿಲ್ಲ ಅಂದ್ಳು: ಸಂಜೆ ಟ್ಯೂಷನ್ ಬಳಿಕ ದೀಪಾಲಿ ಮಕ್ಕಳು ಮನೆಗೆ ಬಂದಿದ್ದಾರೆ. ಮನೆಯಲ್ಲಿ ತಂದೆ ಮಲಗಿರೋದನ್ನು ಕಂಡ ಮಕ್ಕಳು ಅಪ್ಪಾ ಅಂತಾ ಎಬ್ಬಿಸಲು ಹೋದಾಗ, ಅಪ್ಪನಿಗೆ ಹುಷಾರಿಲ್ಲ ತೊಂದ್ರೆ ಕೊಡ್ಬೇಡಿ ಅಂತಾ ದೀಪಾಲಿ ಹೇಳಿದ್ದಾಳೆ. ಮನೆಗೆ ವೈದ್ಯರನ್ನು ಕರೆಸಿ ಪತಿಯನ್ನು ತೋರಿಸಿದಾಗ, ಡಾಕ್ಟರ್ ಮಹೇಶ್ ಸಾವನ್ನಪ್ಪಿರೋದನ್ನು ದೃಢಪಡಿಸಿದ್ದಾರೆ.
ವೈದ್ಯರು ಪತಿಯ ಸಾವನ್ನು ದೃಢಪಡಿಸುತ್ತಿದ್ದಂತೆ ದೀಪಾಲಿ ಹುಳಿಮಾವು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾಳೆ. ಮನೆಗೆ ಬಂದ ಪೊಲೀಸರು ಅನುಮಾನಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ಪೊಲೀಸರ ತನಿಖೆ ವೇಳೆ ಪತಿಯನ್ನು ಕೊಲೆ ಮಾಡಿರುವುದಾಗಿ ಅಂತಾ ದೀಪಾಲಿ ಒಪ್ಪಿಕೊಂಡಿದ್ದಾಳೆ. ಸದ್ಯ ದೀಪಾಲಿ ಮತ್ತು ರಾಜ್‍ಕುಮಾರ್ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.