ರಾಮನಗರ: ಶೀಲ ಶಂಕಿಸಿ ಪತ್ನಿಯನ್ನು ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಾಗಡಿ ತಾಲೂಕಿನ ಹಾಲಶೆಟ್ಟಿಹಳ್ಳಿ ಗ್ರಾಮದ ನಿವಾಸಿ ನಾಗರಾಜ್ ಬಂಧಿತ ಆರೋಪಿ. ಪೂರ್ಣಿಮಾ ಕೊಲೆಯಾದ ಪತ್ನಿ. ಆರೋಪಿ ನಾಗರಾಜ್ ಬುಧವಾರ ಸಂಜೆ ಪತ್ನಿ ಪೂರ್ಣಿಮಾಳನ್ನು ಕೊಲೆಗೈದು ಪರಾರಿಯಾಗಿದ್ದ.
Advertisement
ಪೂರ್ಣಿಮಾ ಹಾಗೂ ನಾಗರಾಜ್ 2018ರ ನವೆಂಬರ್ ನಲ್ಲಿ ವಿವಾಹವಾಗಿದ್ದರು. ಈ ದಂಪತಿ ಮೊದಮೊದಲು ವೈವಾಹಿಕ ಜೀವನದಲ್ಲಿ ಅನ್ಯೋನ್ಯವಾಗಿ ಜೀವನ ನಡೆಸುತ್ತಿದ್ದರು. ಆದರೆ ಇತ್ತೀಚೆಗೆ ಪತ್ನಿಯ ಶೀಲ ಶಂಕಿಸಿದ ನಾಗರಾಜ್ ಆಕೆಗೆ ದೈಹಿಕ ಹಾಗೂ ಮಾನಸೀಕವಾಗಿ ಹಿಂಸೆ ನೀಡುತ್ತಿದ್ದ. ಈ ಕುರಿತು ಪೂರ್ಣಿಮಾ ಯಾರ ಬಳಿಯೂ ಹೇಳಿಕೊಂಡಿರಲಿಲ್ಲ.
Advertisement
Advertisement
ನಾಗರಾಜ್ ಬುಧವಾರ ಸಂಜೆ ಪತ್ನಿಯ ಜೊತೆ ಜಗಳವಾಡಿ, ಹಲ್ಲೆ ನಡೆಸಿದ್ದ. ಈ ವೇಳೆ ಮಾತಿಗೆ ಮಾತು ಬೆಳೆದು ಕೋಪಗೊಂಡ ನಾಗರಾಜ್ ಕೈಗೆ ಸಿಕ್ಕ ಮಚ್ಚಿನಿಂದ ಪೂರ್ಣಿಮಾ ತಲೆಗೆ ಹೊಡೆದು ಕೊಚ್ಚಿ ಕೊಲೆ ಮಾಡಿದ್ದಾನೆ. ನಂತರ ಮನೆಯ ಬಾಗಿಲು ಹಾಕಿ ಸ್ಥಳದಿಂದ ಪರಾರಿಯಾಗಿದ್ದ.
Advertisement
ಈ ಕುರಿತು ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ್ದ ಮಾಗಡಿ ಪೊಲೀಸರು ಪರಿಶೀಲನೆ ನಡೆಸಿ, ಪೂರ್ಣಿಮಾ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲಿಸರು ಆರೋಪಿಗಾಗಿ ಬಲೆ ಬೀಸಿದ್ದರು.
ತುಮಕೂರು ಜಿಲ್ಲೆಯ ಹುಲಿಯೂರುದುರ್ಗದಲ್ಲಿ ಆರೋಪಿ ನಾಗರಾಜ್ ಇರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ತಕ್ಷಣವೇ ಕಾರ್ಯಾಚರಣೆ ನಡೆಸಿದ ಪೊಲೀಸರು ನಾಗರಾಜ್‍ನನ್ನು ಬಂಧಿಸಿದ್ದಾರೆ. ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸಿದಾಗ ಆರೋಪಿ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.