ಭದ್ರಾದ್ರಿ: 40 ವರ್ಷದ ಮಹಿಳೆಯೊಬ್ಬಳು ತನ್ನ ಅತ್ತೆಯನ್ನ ಕೊಲ್ಲಲು ಸುಪಾರಿ ನೀಡಿ, ನಂತರ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿರೋ ಘಟನೆ ತೆಲಂಗಾಣದ ಭದ್ರಾದ್ರಿ ಜಿಲ್ಲೆಯ ಪಾಲ್ವಂಚಾದಲ್ಲಿ ನಡೆದಿದೆ. ಆರೋಪಿ ಮಹಿಳೆಯನ್ನ ಮಂಗಳವಾರದಂದು ಪೊಲೀಸರು ಬಂಧಿಸಿದ್ದಾರೆ.
ಭಾಗ್ಯಲಕ್ಷ್ಮೀ ಬಂಧಿತ ಆರೋಪಿ. ಇಬ್ಬರು ಮಕ್ಕಳ ತಾಯಿಯಾದ ಭಾಗ್ಯಲಕ್ಷ್ಮೀ ತನ್ನ ಅತ್ತೆಯನ್ನ ಕೊಲೆ ಮಾಡಲು ಮೂವರಿಗೆ ಸುಪಾರಿ ಕೊಟ್ಟಿದ್ದಳು. ಮುಂಗಡ ಹಣಕ್ಕಾಗಿ 1 ಲಕ್ಷ ರೂ. ಮೌಲ್ಯದ ಚಿನ್ನದ ಸರವನ್ನ ಸುಪಾರಿ ಹಂತಕರಿಗೆ ನೀಡಿದ್ದಳು. ಅತ್ತೆಯನ್ನ ಕೊಲೆ ಮಾಡಿದ ನಂತರ ಇನ್ನೂ 1 ಲಕ್ಷ ನೀಡುವುದಾಗಿ ಹೇಳಿದ್ದಳು.
ಸೋಮವಾರದಂದು ಗಂಡ ಕೆಲಸಕ್ಕೆ ಹೋದ ನಂತರ ಭಾಗ್ಯಲಕ್ಷ್ಮೀ ಹಂತಕರಿಗೆ ಕರೆ ಮಾಡಿ ಮನೆಗೆ ಕರೆಸಿಕೊಂಡಿದ್ದಳು. ಅವರು ಅತ್ತೆ ದುರ್ಗಮ್ಮ ನನ್ನು ಹಿಡಿದುಕೊಂಡಿದ್ದು, ಭಾಗ್ಯಲಕ್ಷ್ಮೀ ದಿಂಬಿನಿಂದ ಉಸಿರುಗಟ್ಟಿಸಿ ಅತ್ತೆಯನ್ನ ಕೊಂಡಿದ್ದಾಳೆ. ನಂತರ ತನ್ನ ಗಂಡನಿಗೆ ಕರೆ ಮಾಡಿ ತಾಯಿ ಸಾವನ್ನಪ್ಪಿರುವ ಬಗ್ಗೆ ತಿಳಿಸಿದ್ದಾಳೆ.
ತನ್ನ ಅತ್ತೆಯದ್ದು ಸಹಜ ಸಾವು ಎಂದು ಬಿಂಬಿಸಲು ಮಹಿಳೆ ಯತ್ನಿಸಿದ್ದಾಳೆ. ಆದ್ರೆ ಪತಿ ಪೊಲೀಸರಿಗೆ ವಿಷಯ ತಿಳಿಸಿದ್ದು, ತನಿಖೆಯಿಂದ ಸತ್ಯ ಬಯಲಾಗಿದೆ.
ನಂತರ ಆರೋಪಿ ಮಹಿಳೆ ಅತ್ತೆಯನ್ನ ಕೊಂದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾಳೆ. ಮದುವೆಯಾಗಾಗಿನಿಂದ್ಲೂ ಸಣ್ಣ ಸಣ್ಣ ವಿಚಾರಕ್ಕೂ ಕಿರುಕುಳ ನೀಡ್ತಿದ್ರು. ಹೀಗಾಗಿ ಕೊಲೆ ಮಾಡಿದ್ದಾಗಿ ಹೇಳಿದ್ದಾಳೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಭಾಗ್ಯಲಕ್ಷ್ಮೀ ಹಾಗೂ ಸುಪಾರಿ ಹಂತಕರಾದ ವೀರಭದ್ರಂ, ಲಕ್ಷ್ಮಣ್ ಹಾಗೂ ಸತೀಶ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ತನಿಖೆ ಮುಂದುವರೆದಿದ್ದು, ಮರಣೋತ್ತರ ಪರೀಕ್ಷೆಯ ವರದಿ ಹೊರಬರಬೇಕಿದೆ.