ಲಕ್ನೋ: ತನ್ನನ್ನು ಪ್ರೀತಿಸಿ ಕೊನೆಗೆ ಬೇರೆ ಹುಡುಗಿಯನ್ನು ಮದುವೆ ಆಗಲು ಮುಂದಾಗಿದ್ದ ಪ್ರಿಯಕರ ಮೇಲಿದ್ದ ಸಿಟ್ಟಿಗೆ ಯುವತಿಯೊಬ್ಬಳು ಆತನ ಮೇಲೆ ಬಿಸಿ ಬಿಸಿ ಸಾಸಿವೆ ಎಣ್ಣೆ ಎರಚಿ ತನ್ನ ಕೋಪವನ್ನು ತೀರಿಸಿಕೊಂಡಿದ್ದಾಳೆ.
ಭಾನುವಾರದಂದು ಉತ್ತರಪ್ರದೇಶದಲ್ಲಿ ಈ ಘಟನೆ ನಡೆದಿದೆ. ಹಲ್ಲೆಗೊಳಗಾದ ಯುವಕನನ್ನು ಅನುಪ್‍ಷಹರ ನಿವಾಸಿ ಉಮೇಶ್ ಜೋಶಿ ಎಂದು ಗುರುತಿಸಲಾಗಿದೆ. ಉಮೇಶ್ ಒಬ್ಬಳು ಯುವತಿಯನ್ನು ಪ್ರೀತಿಸಿ ಆಕೆಗೆ ಕೈ ಕೊಟ್ಟು ಬೇರೊಬ್ಬಳ ಜೊತೆ ಮದುವೆ ಮಾಡಿಕೊಳ್ಳುತ್ತಿದ್ದನು. ಈ ಬಗ್ಗೆ ಮೋಸ ಹೋದ ಯುವತಿಗೆ ತಿಳಿದು ಆಕೆ ರೊಚ್ಚಿಗೆದ್ದು, ಉಮೇಶ್ ಮದುವೆ ದಿನವೇ ಆತನ ಮೇಲೆ ಬಿಸಿ ಬಿಸಿ ಸಾವಿವೆ ಎಣ್ಣೆ ಹಾಕಿ ಹಲ್ಲೆ ಮಾಡಿದ್ದಾಳೆ.
ಇದರಿಂದ ಯುವಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸದ್ಯ ಚೇತರಿಸಿಕೊಂಡಿದ್ದಾನೆ. ಈ ಬಗ್ಗೆ ಯುವಕನ ತಾಯಿ ಮಾತನಾಡಿ, ನನ್ನ ಮಗನ ಮದುವೆಯನ್ನು ತಡೆದು, ಆತನ ಜೊತೆ ತಾನು ಮದುವೆಯಾಗಲು ಯುವತಿ ಪ್ರಯತ್ನಿಸುತ್ತಿದ್ದಳು. ಆದರೆ ಉಮೇಶ್ ಇದಕ್ಕೆ ಒಪ್ಪದೆ ನಾವು ನೋಡಿದ ಹುಡುಗಿ ಜೊತೆ ಮದುವೆಗೆ ಸಿದ್ಧನಾದ. ಇದಕ್ಕೆ ಆರೋಪಿ ನನ್ನ ಮಗನ ಮೇಲೆ ಹಲ್ಲೆ ನಡೆಸಿದ್ದಾಳೆ. ಆಕೆಯ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆ ಬಳಿಕ ಯುವತಿಯನ್ನು ವಶಕ್ಕೆ ಪಡೆದ ಪೊಲೀಸರು ಆಕೆಯ ಮೇಲೆ ಐಪಿಸಿ ಸೆಕ್ಷನ್ 327 ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.