ರಾಯಚೂರು: ಅನಕ್ಷರತೆ ಅನ್ನೋದು ಒಂದೊಂದು ಸಾರಿ ಎಷ್ಟು ದೊಡ್ಡ ಯಡವಟ್ಟಿಗೆ ದಾರಿ ಮಾಡಿಕೊಡುತ್ತದೆ ಅಂದ್ರೆ ರಾಯಚೂರಿನಲ್ಲಿ ಅಂಗನವಾಡಿ ಸಹಾಯಕಿಯೊಬ್ಬರು ಕೆಲಸವನ್ನೇ ಕಳೆದುಕೊಂಡಿದ್ದಾರೆ. ತನ್ನ ಹೆಸರು ಬಿಟ್ಟು ಬೇರೆ ಏನನ್ನೂ ಬರೆಯಲು ಬಾರದ ಸಹಾಯಕಿಯ ರಜೆಯ ಪತ್ರ ರಾಜೀನಾಮೆ ಪತ್ರವಾಗಿ ಸರ್ಕಾರ ಅದನ್ನ ಅಂಗೀಕರಿಸಿ ಮನೆಗೆ ಕಳುಹಿಸಿದೆ.
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಬೂದಿಹಾಳ ಕ್ಯಾಂಪ್ ಅಂಗನವಾಡಿ ಸಹಾಯಕಿ ಭೀಮಮ್ಮ ಮಾರ್ಚ್ 1, 2017 ರಂದು ರಜೆ ಪತ್ರ ನೀಡಿದ್ದರು. ರಜೆ ಮೇಲೆ ತೆರಳಿದ ಭೀಮಮ್ಮ ನಾಲ್ಕೈದು ದಿನ ತಡವಾಗೇ ಕೆಲಸಕ್ಕೆ ಹಾಜರಾಗಿದ್ದಾರೆ. ಆದ್ರೆ ಓದಲು, ಬರೆಯಲು ಬಾರದ ಭೀಮಮ್ಮ ಅಂಗನವಾಡಿ ಕಾರ್ಯಕರ್ತೆಗೆ ಬಿಳಿ ಹಾಳೆಯ ಮೇಲೆ ಸಹಿ ಮಾಡಿ ಕೊಟ್ಟಿದ್ದೇ ಯಡವಟ್ಟಾಗಿದೆ.
Advertisement
ರಜೆ ಪತ್ರ ಬರೆಯುವ ಬದಲಾಗಿ ಅಂಗನವಾಡಿ ಕಾರ್ಯಕರ್ತೆ ರಾಜೇಶ್ವರಿ ವೈಯಕ್ತಿಕ ಕಾರಣಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಅಂತ ಬರೆದು ಹಿರಿಯ ಅಧಿಕಾರಿಗಳಿಗೆ ಕಳುಹಿಸಿದ್ದಾರೆ. ಸಿಂಧನೂರು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಯೋಗಿತಾ ಬಾಯಿ ರಾಜೀನಾಮೆಯನ್ನ ಶಿಫಾರಸ್ಸು ಮಾಡಿದ್ದಾರೆ. ಈಗ ಜೂನ್ 13 ಕ್ಕೆ ರಾಜೀನಾಮೆಯನ್ನ ಅಂಗೀಕರಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಆದ್ರೆ ಏನೂ ತಿಳಿಯದೆ ಕೆಲಸಕ್ಕೆ ಹೋದ ಭೀಮಮ್ಮನಿಗೆ ಶಾಕ್ ಹೊಡೆದಂತಾಗಿದೆ.
Advertisement
Advertisement
ಖಾಲಿ ಹಾಳೆಯ ಮೇಲೆ ಸಹಿ ಮಾಡಿ ಹೇಳಿದ್ದಕ್ಕಿಂತ ಹೆಚ್ಚು ದಿನ ರಜೆ ತೆಗೆದುಕೊಂಡಿದ್ದೇ ಕೆಲಸಕ್ಕೆ ಕುತ್ತು ತಂದಿದೆ. ಹೇಳದೆ ಕೇಳದೆ ರಜೆ ತೆಗೆದುಕೊಳ್ಳುತ್ತಿದ್ದರಿಂದ ಈ ರೀತಿ ಮಾಡಿರುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಕ್ರಮ ಕೈಗೊಳ್ಳುವ ಬದಲು ಅನಕ್ಷರತೆಯನ್ನ ದುರ್ಬಳಕೆ ಮಾಡಿಕೊಂಡು ಅಂಗನವಾಡಿ ಸಹಾಯಕಿಯನ್ನ ಕೆಲಸದಿಂದ ತೆಗೆದು ಹಾಕಿದ್ದಾರೆ ಎನ್ನಲಾಗಿದೆ.
Advertisement
ಒಟ್ನಲ್ಲಿ, ಓದು, ಬರಹ ಬಾರದ ಅನಕ್ಷರಸ್ಥೆ ಈಗ ಕೆಲಸ ಕಳೆದುಕೊಂಡಿದ್ದಾರೆ. ಆದ್ರೆ ಪಿತೂರಿ ಮಾಡಿ ವ್ಯಾಪ್ತಿಮೀರಿ ರಾಜೀನಾಮೆ ಪತ್ರ ಬರೆದು ಮೇಲಾಧಿಕಾರಿಗಳಿಗೆ ಸಲ್ಲಿಸಿರುವ ಅಂಗನವಾಡಿ ಕಾರ್ಯಕರ್ತೆ ವಿರುದ್ಧ ದೂರು ನೀಡಲು ಭೀಮಮ್ಮ ಮುಂದಾಗಿದ್ದಾರೆ. ಕಚೇರಿಯಿಂದ ಕಚೇರಿಗೆ ಅಲೆದಾಡಿ ಕೆಲಸ ಉಳಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ.