InternationalLatest

ಮೊದಲ ಮಗುವಾದ 26 ದಿನಕ್ಕೆ ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ

Advertisements

ಢಾಕಾ: ಬಾಂಗ್ಲಾದೇಶದ ತಾಯಿಯೊಬ್ಬರು ಮೊದಲ ಮಗುವಿಗೆ ಜನ್ಮ ನೀಡಿ 26 ದಿನಕ್ಕೆ ಅವಳಿ ಮಕ್ಕಳಿಗೆ ಜನ್ಮ ನೀಡುವುದರ ಮೂಲಕ ವೈದ್ಯರಿಗೆ ಅಚ್ಚರಿ ನೀಡಿದ್ದಾರೆ.

ಅರಿಫಾ ಸುಲ್ತಾನ(20) ಕಳೆದ ತಿಂಗಳು ನಾರ್ಮಲ್ ಡೆಲಿವರಿ ಮೂಲಕ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮೊದಲ ಮಗುವಿನ ಡೆಲಿವರಿ ಮಾಡುವ ವೇಳೆ ವೈದ್ಯರು ಮಹಿಳೆ ದೇಹದಲ್ಲಿ ಎರಡನೇ ಗರ್ಭಾಶಯ ಇರುವುದನ್ನು ಗಮನಿಸಿರಲಿಲ್ಲ.

ಅರಿಫಾ ಅವರಿಗೂ ನಾನು ಅವಳಿ ಮಕ್ಕಳ ಗರ್ಭಿಣಿ ಎಂಬ ವಿಷಯ ಗೊತ್ತಿರಲಿಲ್ಲ. ಆಕೆ ಮೊದಲ ಮಗುವಿಗೆ ಜನ್ಮ ನೀಡಿ 26 ದಿನದ ಬಳಿಕ ಆಕೆಯ ಹೊಟ್ಟೆಯಲ್ಲಿದ್ದ ನೀರು ಒಡೆದಿದೆ. ಆಗ ಅರಿಫಾ ಆಸ್ಪತ್ರೆಗೆ ದಾಖಲಾದರು ಎಂದು ಸ್ತ್ರೀರೋಗ ತಜ್ಞೆ ಶೀಲಾ ಪೊದರ್ ತಿಳಿಸಿದ್ದಾರೆ.

ಕಳೆದ ಶುಕ್ರವಾರ ಅರಿಫಾ ಆಸ್ಪತ್ರೆಗೆ ಬಂದ ತಕ್ಷಣ ವೈದ್ಯೆ ಶೀಲಾ ಸಿಸೇರಿಯನ್ ಮಾಡಿ ಅವಳಿ ಮಕ್ಕಳಾದ ಒಂದು ಗಂಡು ಹಾಗೂ ಒಂದು ಹೆಣ್ಣು ಮಗುವನ್ನು ಹೊರತೆಗೆದಿದ್ದಾರೆ. ಮಕ್ಕಳಿಬ್ಬರು ಆರೋಗ್ಯವಾಗಿದ್ದು, ಮಂಗಳವಾರ ತಾಯಿ- ಮಕ್ಕಳನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.

ನಾನು ನನ್ನ 30 ವರ್ಷದ ವೈದ್ಯಕೀಯದ ಅನುಭವದಲ್ಲಿ ಇಂತಹ ಕೇಸ್ ನೋಡಿಲ್ಲ ಎಂದು ಜೆಸ್ಸೋರ್ ಜಿಲ್ಲಾಸ್ಪತ್ರೆಯ ವೈದ್ಯ ದಿಲೀಪ್ ರಾಯ್ ಹೇಳಿದ್ದಾರೆ. ಅಲ್ಲದೆ ಅರಿಫಾಳ ಎರಡನೇ ಗರ್ಭಧಾರಣವನ್ನು ಪತ್ತೆ ಹಚ್ಚದ ಕಾರಣ ಖುಲ್ನಾ ಮೆಡಿಕಲ್ ಕಾಲೇಜು ಆಸ್ಪತ್ರೆಯ ವೈದ್ಯರ ವಿರುದ್ಧ ದಿಲೀಪ್ ಕ್ರಮಕೈಗೊಂಡಿದ್ದಾರೆ.

ನನ್ನ ಪತಿ ಕಾರ್ಮಿಕನಾಗಿದ್ದು, ಪ್ರತಿ ತಿಂಗಳು 5 ಸಾವಿರ ರೂ. ದುಡಿಯುತ್ತಾರೆ. ನನಗೆ ಮೂವರು ಮಕ್ಕಳು ಹುಟ್ಟಿರುವುದು ಸಂತೋಷ. ಆದರೆ ಅವರನ್ನು ಹೇಗೆ ನೋಡಿಕೊಳ್ಳುವುದು ಎಂಬ ಚಿಂತೆ ಶುರುವಾಗಿದೆ ಎಂದು ಅರಿಫಾ ಹೇಳಿದ್ದಾರೆ. ಅಲ್ಲಾನ ಚಮತ್ಕಾರದಿಂದ ನನ್ನ ಮೂವರು ಮಕ್ಕಳು ಆರೋಗ್ಯವಾಗಿದ್ದಾರೆ. ನನ್ನ ಮಕ್ಕಳನ್ನು ಖುಷಿಯಾಗಿ ಇಡಲು ನಾನು ಪ್ರಯತ್ನಪಡುತ್ತೇನೆ ಎಂದು ಅರಿಫಾ ಪತಿ ಸುಮೋನ್ ಬಿಸ್ವಾಸ್ ತಿಳಿಸಿದ್ದಾರೆ.

Leave a Reply

Your email address will not be published.

Back to top button