ಭೋಪಾಲ್: ಗರ್ಭಿಣಿಯೊಬ್ಬರನ್ನು ಹೆರಿಗೆ ರೂಂ ವರೆಗೂ ನಡೆದುಕೊಂಡು ಬರುವಂತೆ ಹೇಳಿದ್ದು, ನಡೆದುಕೊಂಡು ಹೋಗುವಾಗಲೇ ಹೆರಿಗೆಯಾಗಿ ಮಗು ಸಾವನ್ನಪ್ಪಿರುವ ಅಮಾನವೀಯ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಬೇತುಲ್ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, 22 ವರ್ಷದ ಗರ್ಭಿಣಿಯೊಬ್ಬರು ಆಂಬುಲೆನ್ಸ್ ಮೂಲಕ ಹೆರಿಗೆ ನೋವಿನಿಂದ ಆಸ್ಪತ್ರೆಗೆ ಬಂದಿದ್ದಾರೆ. ಆದರೆ ಆಸ್ಪತ್ರೆಗೆ ಬಂದು ಗರ್ಭಿಣಿ ಕೂಗಿಕೊಂಡಾಗ ಆಕೆಯ ಸಹಾಯಕ್ಕೆ ನರ್ಸ್ ಅಥವಾ ಸೂಲಗಿತ್ತಿ ಯಾರು ಸಹಾಯ ಮಾಡಲು ಬರಲಿಲ್ಲ. ಗರ್ಭಿಣಿ ಮತ್ತೆ ಕೂಗಿಕೊಂಡಾಗ ಆಸ್ಪತ್ರೆಯಲ್ಲಿದ್ದ ಸೂಲಗಿತ್ತಿ ಬಂದಿದ್ದಾಳೆ. ಆದರೆ ಆಕೆ ಮಾನವೀಯತೆ ಇಲ್ಲದೆ ಗರ್ಭಿಣಿಯನ್ನು ಹೆರಿಗೆ ರೂಂಗೆ ನಡೆದುಕೊಂಡು ಬರುವಂತೆ ಹೇಳಿದ್ದಾಳೆ.
ಸೂಲಗಿತ್ತಿ ಹೇಳಿದಂತೆ ಗರ್ಭಿಣಿ ಹೆರಿಗೆ ರೂಂಗೆ ನಡೆದುಕೊಂಡು ಹೋಗಿದ್ದಾರೆ. ನಡೆದುಕೊಂಡು ಹೋಗುವಾಗ ತೀವ್ರ ನೋವುಂಟಾಗಿ ನಡೆಯಲು ಸಾಧ್ಯವಾಗದೇ ಮಧ್ಯದಲ್ಲಿಯೇ ಕುಳಿತಿದ್ದಾರೆ. ಆದರೂ ಸೂಲಗಿತ್ತಿ ನಡೆದುಕೊಂಡು ಬರುವಂತೆ ಬಲವಂತ ಮಾಡಿ ನಡೆಸಿದ್ದಾಳೆ. ಆದರೆ ಗರ್ಭಿಣಿಗೆ ತೀವ್ರ ನೋವಿನಿಂದ ನಡೆದುಕೊಂಡು ಹೋಗುವಾಗಲೇ ಹೆರಿಗೆಯಾಗಿದೆ. ಬಳಿಕ ಮಗು ನೆಲಕ್ಕೆ ಬಿದ್ದಿದೆ. ನೆಲಕ್ಕೆ ಬಿದ್ದ ತಕ್ಷಣ ತಲೆಗೆ ಗಂಭೀರವಾಗಿ ಪೆಟ್ಟಾಗಿ ನವಜಾತ ಶಿಶು ಮೃತಪಟ್ಟಿದೆ.
ಮಗು ಕಳೆದುಕೊಂಡ ತಾಯಿ ಮತ್ತು ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಆಸ್ಪತ್ರೆ ಸಿಬ್ಬಂದಿಯ ಅಜಾಗರೂಕತೆಯಿಂದ ಈ ಘಟನೆ ನಡೆದಿದ್ದು, ಆಸ್ಪತ್ರೆಯ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.