ದಾವಣಗೆರೆ \ವಿಜಯನಗರ: ಉಚ್ಚಂಗಿದುರ್ಗದ (Uchangidurga )ದೇವಾಲಯಕ್ಕೆ ಬಂದು ವಾಪಸ್ ಆಗುತ್ತಿದ್ದ ಮಹಿಳೆಯೊಬ್ಬಳ ಮೇಲೆ ಬಸ್ಸಿನ ಚಾಲಕ, ಕಂಡಕ್ಟರ್ ಹಾಗೂ ಕ್ಲೀನರ್ ಸೇರಿಕೊಂಡು ಸಾಮೂಹಿಕ ಅತ್ಯಾಚಾರ ನಡೆಸಿರುವುದು ದಾವಣಗೆರೆ ಸಮೀಪದ ಚನ್ನಾಪುರದ ಬಳಿ ನಡೆದಿದೆ. ಈ ವೇಳೆ ಮಹಿಳೆ ಚೀರಾಡಿದ್ದು, ಸ್ಥಳೀಯರು ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ.
ಬೆಳಗಾವಿ (Belagavi) ಮೂಲದ ಮಹಿಳೆ, ತನ್ನ ಎರಡು ಮಕ್ಕಳನ್ನ ಕರೆದುಕೊಂಡು ವಿಜಯನಗರ (Vijayanagar) ಜಿಲ್ಲೆಯ ಹರಪನಹಳ್ಳಿಯ ಉಚ್ಚಂಗಿದುರ್ಗಕ್ಕೆ ಜಾತ್ರೆಗೆ ಬಂದಿದ್ದಳು. ಮಹಿಳೆ ವಾಪಸ್ ಹೋಗುವಾಗ ತಡವಾಗಿದ್ದು, ಕೊನೆಯ ಬಸ್ಸಿಗೆ ಹತ್ತಿದ್ದಳು. ಬಸ್ಸಿನಲ್ಲಿದ್ದ ಏಳೆಂಟು ಜನ ಪ್ರಯಾಣಿಕರು ಕೆಳಗೆ ಇಳಿದಿದ್ದೇ ತಡ, ಬಸ್‍ನ ಚಾಲಕ, ಕ್ಲೀನರ್ ಹಾಗೂ ಕಂಡಕ್ಟರ್ ಮೂವರು ಸೇರಿ ಚನ್ನಾಪುರ ಬಳಿಯ ನಿರ್ಜನ ಪ್ರದೇಶಕ್ಕೆ ಬಸ್ ತೆಗೆದುಕೊಂಡು ಹೋಗಿದ್ದಾರೆ. ಬಳಿಕ ಇಬ್ಬರು ಮಕ್ಕಳ ಬಾಯಿಗೆ ಬಟ್ಟೆ ತುರುಕಿ ಕೈಕಾಲು ಕಟ್ಟಿ, ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಅತ್ಯಾಚಾರ ಆರೋಪಿಗೆ ಈಗ ಬೇಕಿದೆ ಹನುಮನ ಶ್ರೀರಕ್ಷೆ – ನಿತ್ಯ ಹನುಮಾನ್ ಚಾಲಿಸ ಪಠಿಸುತ್ತಿರೋ ಪ್ರಜ್ವಲ್ ರೇವಣ್ಣ
ಈ ವೇಳೆ ಮಹಿಳೆಯ ಕಿರಿಚಾಟ ಕೇಳಿಸಿಕೊಂಡ ದೂರದ ಜಮೀನಿನಲ್ಲಿದ್ದ ರೈತರು ಹಾಗೂ ಸ್ಥಳೀಯರು ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ. ಬಸ್ ಚಾಲಕ ಪ್ರಕಾಶ್ ಮಡಿವಾಳರ, ಕ್ಲೀನರ್ ರಾಜಶೇಖರ್ ಹಾಗೂ ಕಂಡಕ್ಟರ್ ಸುರೇಶ್‍ನನ್ನು ಹಿಡಿದು ಅರಸೀಕೆರೆ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ಪೊಲೀಸರು ಮಹಿಳೆಯಿಂದ ದೂರು ದಾಖಲಿಸಿಕೊಳ್ಳದೆ, ಬಿಳಿ ಹಾಳೆಗೆ ಸಹಿ ಮಾಡಿಸಿಕೊಂಡು 2,000 ರೂ. ನೀಡಿ ಉಚ್ಚಂಗಿದುರ್ಗದ ಪಾದುಗಟ್ಟೆಯ ಬಳಿ ಬಿಟ್ಟು ಹೋಗಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಮಾಹಿತಿ ತಿಳಿದ ದಲಿತ ಸಂಘಟನೆಯ ಮುಖಂಡರು, ವಿಜಯನಗರ ಎಸ್ಪಿ ಶ್ರೀಹರಿಬಾಬು ಅವರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಎಸ್‍ಪಿ ಸೂಕ್ತ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಆರೋಪಿಗಳನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ. ಇದನ್ನೂ ಓದಿ: 2 ಕೋಟಿ ಮೌಲ್ಯದ ಹೆರಾಯಿನ್ ಜೊತೆ ಪಂಜಾಬ್ ಲೇಡಿ ಕಾನ್‌ಸ್ಟೇಬಲ್ ಬಂಧನ