– ಮಹಿಳೆಯ ಅಸಲಿ ಕಥೆ ಬಯಲು
ಚಿಕ್ಕೋಡಿ(ಬೆಳಗಾವಿ): ಆಕೆ 17 ಮಕ್ಕಳನ್ನ ಹೆತ್ತಿದ್ದಾಳಂತೆ, ಮಹಾತಾಯಿಯಂತೆ, 20 ಬಾರಿ ಗರ್ಭಧಾರಣೆ ಮಾಡಿದ್ದಾಳೆ ಎನ್ನುವ ಸುದ್ದಿ ಹಲವು ದಿನಗಳಿಂದ ಹರಿದಾಡುತ್ತಿದ್ದು, ಈ ಸುದ್ದಿಗೆ ಕೊನೆಗೂ ಫುಲ್ ಸ್ಟಾಪ್ ಬಿದ್ದಿದೆ.
ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಮಹಿಳೆ 20 ಬಾರಿ ಗರ್ಭಿಣಿಯಾಗಿ 17 ಮಕ್ಕಳನ್ನ ಹೆತ್ತಿದ್ದಾಳೆ. 21 ನೇ ಬಾರಿ ಗರ್ಭಧಾರಣೆ ಮಾಡಿದ್ದು, 9 ತಿಂಗಳಲ್ಲಿ ಮಗು ಗರ್ಭದಲ್ಲಿಯೇ ಸತ್ತು ಹೋಗಿ ಗರ್ಭಪಾತ ಆಗಿದೆ. ಆಕೆ ಈಗ ಬೆಳಗಾವಿ ಜಿಲ್ಲೆಯಲ್ಲಿದ್ದಾಳೆಂದು ಸುದ್ದಿ ಹರಿದಾಡುತಿತ್ತು. ಈ ಸುದ್ದಿ ಕೇಳಿ ಹಲವರಿಗೆ ಆಶ್ಚರ್ಯ 17 ಮಕ್ಕಳ ಹೆತ್ತ ಆ ಮಹಾತಾಯಿ ಹೇಗಿದ್ದಾಳೆ? ಆಕೆಯನ್ನ ಒಮ್ಮೆ ನೋಡಬೇಕು ಎನ್ನುವ ಆಸೆಯಾದರೆ, ಇನ್ನೂ ಕೆಲವರು ಆಕೆಯ ಪತಿ ಯಾರಪ್ಪ ಅನ್ನೋದರ ಬಗ್ಗೆ ಮಾತನಾಡ ತೊಡಗಿದ್ದರು.
Advertisement
Advertisement
ಇತ್ತ 17 ಮಕ್ಕಳ ತಾಯಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕಾರ್ಖಾನೆ ಒಂದರಲ್ಲಿ ಕಬ್ಬು ಕಟಾವು ಮಾಡುವ ಕೆಲಸ ಮಾಡುತ್ತಿದ್ದಾಳೆ ಎನ್ನುವ ಸುದ್ದಿ ಕೇಳಿ ಬೆಳಗಾವಿ ಜಿಲ್ಲಾಡಳಿತ ಮಹಿಳೆಯ ಹುಡುಕಾಟಕ್ಕೆ ಇಳಿದಿತ್ತು. ಸ್ವತಃ ಬೆಳಗಾವಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮುನ್ಯಾಳ 10 ಜನರ ತಂಡ ಮಹಿಳೆಯ ಶೋಧ ಕಾರ್ಯಕ್ಕೆ ಮುಂದಾಗಿದ್ದು, ಕೊನೆಗೂ ಆ ಮಹಿಳೆಯನ್ನು ಪತ್ತೆ ಹಚ್ಚಿದ್ದಾರೆ.
Advertisement
ಆಕೆಯ ಹೆಸರು ಲಂಕಾಬಾಯಿ ರಾಜೇಬಾಹು ಖರಾತ ಮೂಲತಃ ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಮಜಲಗಾವ ಗ್ರಾಮದ ನಿವಾಸಿ. ಪ್ರತಿ ವರ್ಷವೂ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಕಬ್ಬು ಕಾಟಾವು ಮಾಡಲು ತಮ್ಮ ಕುಟುಂಬ ಸಮೇತ ಆಗಮಿಸುತ್ತಾರೆ. ಗಬಾಳಿ ಗ್ಯಾಂಗ್ ಅಂತಲೇ ಇವರು ಇಲ್ಲಿ ಫೇಮಸ್ ಆಗಿದ್ದಾರೆ. ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ ಜಿಲ್ಲೆಯಲ್ಲಿ ಕಬ್ಬು ಕಟಾವು ಮಾಡಿ ಮತ್ತೆ ತಮ್ಮ ಜಿಲ್ಲೆಗೆ ಈ ಗಬಾಳಿ ಗ್ಯಾಂಗ್ ಹೋಗುತ್ತದೆ. ಇದನ್ನೂ ಓದಿ: 17ನೇ ಮಗುವಿಗೆ ಜನ್ಮ ನೀಡಿದ 38ರ ಮಹಾತಾಯಿ
Advertisement
ಲಂಕಾಬಾಯಿ ಸದ್ಯ ಧಾರವಾಡ ಜಿಲ್ಲೆಯ ಶಿಗನಹಳ್ಳಿ ಗ್ರಾಮದಲ್ಲಿ ಪತ್ತೆಯಾಗಿದ್ದು, ಲಂಕಾಬಾಯಿಯನ್ನ ಹುಕ್ಕೇರಿ ತಾಲೂಕು ವೈದ್ಯರ ತಂಡದವರು ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಮೂರು ದಿನಗಳಿಂದ ನಿರಂತರ ಹುಡುಕಾಟದ ಬಳಿಕ ಲಂಕಾಬಾಯಿ ಶಿಗನಹಳ್ಳಿಯಲ್ಲಿ ಕಬ್ಬು ಕಟಾವು ಮಾಡುವ ವೇಳೆ ಪತ್ತೆಯಾಗಿದ್ದಾಳೆ. ಅಸಲಿಗೆ ಲಂಕಾಬಾಯಿ ಹೇಳುವ ಪ್ರಕಾರ ಆಕೆಗೆ 9 ಹೆಣ್ಣು, ಇಬ್ಬರು ಗಂಡು ಒಟ್ಟು 11 ಜನ ಮಕ್ಕಳಿದ್ದಾರೆ.
ಹೆಣ್ಣುಮಕ್ಕಳ ಮದುವೆ ಆಗಿದ್ದು ಮೊಮ್ಮಕ್ಕಳು ಸಹ ಇದ್ದಾರೆ. ಲಂಕಾಬಾಯಿ 21 ಬಾರಿ ಗರ್ಭಧಾರಣೆ ಮಾಡಿಲ್ಲ ಬದಲಾಗಿ 12 ಬಾರಿ ಗರ್ಭಧಾರಣೆ ಮಾಡಿದ್ದು, 4 ತಿಂಗಳ ಗರ್ಭಿಣಿ ಆಗಿದ್ದಳು. ಉದ್ಯೋಗ ಅರಸಿ ಬೀಡ್ ನಿಂದ ಇಲ್ಲಿಗೆ ಟ್ರ್ಯಾಕ್ಟರ್ ನಲ್ಲಿ ಆಗಮಿಸಿದ್ದು, ಈ ವೇಳೆ ಗರ್ಭಪಾತ ಆಗಿದೆ. ಈಗ ನಾನು ಆರಾಮಾಗಿದ್ದೇನೆ ಎಂದು ಲಂಕಾಬಾಯಿ ಹೇಳಿದ್ದಾಳೆ. ಸದ್ಯ ಈಕೆಗೆ ಧಾರವಾಡ ಜಿಲ್ಲೆಯ ಗರಗ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.