ಮುಂಬೈ: ತನ್ನ ಮೂರು ವರ್ಷದ ಮಗಳನ್ನೇ ಕೊಲೆ ಮಾಡಿ ತಲೆಮರೆಸಿಕೊಂಡಿರುವ ಮಹಿಳೆಗಾಗಿ ಮುಂಬೈನ ಶಿವಾಜಿನಗರ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಬುಧವಾರ ಸಂಜೆ ಸುಮಾರು 4.30ರ ವೇಳೆಗೆ ರಾಜವಾಡಿ ಆಸ್ಪತ್ರೆಯಲ್ಲಿ ಬಾಲಕಿ ಸಾವನ್ನಪ್ಪಿರುವ ಬಗ್ಗೆ ಪೊಲೀಸರಿಗೆ ಕರೆ ಬಂದಿತ್ತು. ಪೊಲೀಸರು ಹೇಳುವ ಪ್ರಕಾರ ಅವರು ಆಸ್ಪತ್ರೆಗೆ ಹೋದ ಬಳಿಕ ಆರೋಪಿ ತಾಯಿ ನಾದ್ರಾ ಶೇಕ್(22) ಬಗ್ಗೆ ಗೊತ್ತಾಗಿದೆ. ಈಕೆ ತನ್ನ ಮಗಳೊಂದಿಗೆ ಆಸ್ಪತ್ರೆಗೆ ಬಂದಿದ್ದಳು ಎಂದು ವೈದ್ಯರು ಹೇಳಿದ್ದಾರೆ.
Advertisement
ನಾದ್ರಾ ಬಂದು ಮಗಳಿಗೆ ಹುಷಾರಿಲ್ಲ ಎಂದು ಹೇಳಿದಳು. ಬಾಲಕಿಗೆ ಏನಾಗಿದೆ? ಆಕೆ ಯಾವುದಾದ್ರೂ ಕಾಯಿಲೆಯಿಂದ ಬಳಲುತ್ತಿದ್ದಾಳಾ ಎಂದು ಕೇಳಿದಾಗ, ನನ್ನ ಮಗಳಿಗೆ ಹೊಟ್ಟೆ ನೋವಿದೆ ಎಂದು ಹೇಳಿದಳು. ಚಿಕಿತ್ಸೆಗೆ ಸಂಬಂಧಿಸಿದಂತೆ ಕಾಗದಗಳನ್ನ ತೋರಿಸುವಂತೆ ಕೇಳಿದಾಗ ಅವು ಮನೆಯಲ್ಲಿವೆ ಎಂದು ಹೇಳಿದಳು. ನಂತರ ಕಾಗದಗಳನ್ನ ತರುವುದಾಗಿ ಹೇಳಿ ಹೋದಳು. ಆದ್ರೆ ಆಕೆ ವಾಪಸ್ ಬರಲಿಲ್ಲ ಎಂದು ವೈದ್ಯರು ಪೊಲೀಸರಿಗೆ ತಿಳಿಸಿದ್ದಾರೆ. ಆಕೆಯ ಬರುವಿಕೆಗಾಗಿ ಕೆಲ ಸಮಯ ಕಾದ ನಂತರ ಆಸ್ಪತ್ರೆಯವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
Advertisement
Advertisement
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ ಬಳಿಕ ಶಿವಾಜಿನಗರದಲ್ಲಿನ ಆರೋಪಿ ನಾದ್ರಾ ಮನೆಗೆ ಹೋಗಿದ್ದಾರು. ನಾದ್ರಾ ತನ್ನ ಗಂಡ ಹಾಗೂ ಐದು ವರ್ಷದ ಮಗನೊಂದಿಗೆ ವಾಸವಿದ್ದಳು. ಆದ್ರೆ ಅಂದು ಆಕೆ ಮನೆಯಲ್ಲಿ ಇರಲಿಲ್ಲ. ನಾದ್ರಾ ಬಗ್ಗೆ ನೆರೆಹೊರೆಯವರನ್ನ ವಿಚಾರಿಸಿದಾಗ, ಆಕೆ ಯಾವಾಗ್ಲೂ ಬೇರೆಯವರೊಂದಿಗೆ ಜಗಳವಾಡುತ್ತಿದ್ದಳು. ಒಮ್ಮೆ ತನ್ನ ಮಗನಿಗೆ ರಕ್ತಬರುವಂತೆ ಹೊಡೆದಿದ್ದಳು ಎಂದು ಹೇಳಿದ್ದಾರೆ.
Advertisement
ಪೊಲೀಸರು ಬಾಲಕನನ್ನು ವಿಚಾರಿಸಿದಾಗ, ತನ್ನ ತಂಗಿಗೆ ತಾಯಿ ನಾದ್ರಾ ಯಾವ ರೀತಿ ಹೊಡೆದಳು ಎಂಬುದನ್ನ ಹೇಳಿದ್ದಾನೆ. ಆರೋಪಿ ಮಹಿಳೆಯನ್ನ ಪತ್ತೆ ಮಾಡಲು ಪೊಲೀಸರು ಹಲವು ಸ್ಥಳಗಳಲ್ಲಿ ತಂಡಗಳನ್ನ ನಿಯೋಜಿಸಿದ್ದಾರೆ.
ಆರೋಪಿ ಮಹಿಳೆಯ ಗಂಡ ಸದ್ಯ ಕೆಲಸದ ಮೇಲೆ ಬಿಹಾರಕ್ಕೆ ಹೋಗಿದ್ದು, ಅವರನ್ನ ಸಂಪರ್ಕಿಸಿದ್ದೇವೆ. ಅವರು ಮುಂಬೈಗೆ ಬರುತ್ತಿದ್ದಾರೆ. ಬಾಲಕಿಯ ಮೃತದೇಹದ ಮೇಲೆ ಹಲವು ಗಾಯದ ಗುರುತುಗಳ ಇರೋದನ್ನ ಆಸ್ಪತ್ರೆಯವರು ಪತ್ತೆ ಮಾಡಿದ್ದಾರೆ. ಯಾವುದೋ ವಸ್ತುವಿನಿಂದ ಬಾಲಕಿ ಮೇಲೆ ಹಲ್ಲೆ ಮಾಡಿರಬಹುದೆಂದು ವೈದ್ಯರು ಶಂಕಿಸಿದ್ದಾರೆ. ಆದ್ರೆ ನಾವು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ. ಹಲ್ಲೆಯಿಂದಲೇ ಬಾಲಕಿ ಸಾವನ್ನಪ್ಪಿದ್ದಾಳೆಂದು ದೃಢಪಟ್ಟರೆ ಐಪಿಸಿ ಸೆಕ್ಷನ್ 302(ಕೊಲೆ) ಅಡಿ ಪ್ರಕರಣ ದಾಖಲಿಸಿಕೊಳ್ಳುತ್ತೇವೆ ಎಂದು ಶಿವಾಜಿನಗರ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಹುಸೇನ್ ಜಟ್ಕರ್ ಪತ್ರಿಕೆಯೊಂದಕ್ಕೆ ಹೇಳಿದ್ದಾರೆ.