ಬೆಂಗಳೂರು: ನಗರದ (Bengaluru) ಕಾಫಿ ಶಾಪ್ ಒಂದರ ವಾಶ್ ರೂಮ್‍ನಲ್ಲಿ ಮೊಬೈಲ್ (Mobile) ಇಟ್ಟು ವೀಡಿಯೋ ಮಾಡಿದ್ದ ಪ್ರಕರಣ ಮಾಸುವ ಮುನ್ನವೇ ಇದೇ ಬಗೆಯ ಪ್ರಕರಣ ಕಲಾಸಿಪಾಳ್ಯದಲ್ಲಿ (Kalasipalya) ನಡೆದಿದೆ. ನಗರದ ಊರ್ವಶಿ ಚಿತ್ರಮಂದಿರದ ಮಹಿಳೆಯರ ವಾಶ್ ರೂಮ್‍ನಲ್ಲಿ ವೀಡಿಯೋ ಮಾಡಲು ಹೋಗಿ ಅಪ್ರಾಪ್ತನೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ.
ಚಿತ್ರಮಂದಿರಕ್ಕೆ `ಭೀಮಾ’ ಚಿತ್ರ ನೋಡಲು ಯುವತಿಯೊಬ್ಬಳು ಬಂದಿದ್ದಳು. ಆಕೆ ವಾಶ್ ರೂಮ್‌ಗೆ ತೆರಳಿದ್ದ ವೇಳೆ, ಅಪ್ರಾಪ್ತನೊಬ್ಬ ಕದ್ದು ಮುಚ್ಚಿ ಮಹಿಳೆಯರ ವಾಶ್ ರೂಮ್‍ನಲ್ಲಿ ವೀಡಿಯೋ ಮಾಡಿದ್ದಾನೆ. ಕೂಡಲೇ ಯುವತಿ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಳು.
ಇದೀಗ ಅಪ್ರಾಪ್ತ ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಆ.11 ರಂದು ಬಿಇಎಲ್ ರಸ್ತೆಯಲ್ಲಿರುವ ಥರ್ಡ್ ವೇವ್ ಕೆಫೆಯಲ್ಲಿ ವಾಶ್ ರೂಮ್‍ನ ಕಸದ ಡಬ್ಬದಲ್ಲಿ ಸಣ್ಣನೆಯ ರಂಧ್ರ ಮಾಡಿ ಮೊಬೈಲ್‍ನಲ್ಲಿ ರೆಕಾರ್ಡಿಂಗ್ ಆನ್ ಮಾಡಿ ಇಡಲಾಗಿತ್ತು. ಮಹಿಳೆಯೊಬ್ಬರು ವಾಶ್ ರೂಮ್‍ಗೆ ಹೋದಾಗ ಮೊಬೈಲ್ ಇರುವುದು ಪತ್ತೆಯಾಗಿತ್ತು. ತಕ್ಷಣವೇ ಮಹಿಳೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಸಂಬಂಧ ಕಾಪಿಶಾಪ್‍ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.