Connect with us

ಮಗ ಇಲ್ಲದಿದ್ದಾಗ ಮಂಚಕ್ಕೆ ಕರೆದ್ರಂತೆ ಮಾವ: ದೂರು ದಾಖಲು

ಮಗ ಇಲ್ಲದಿದ್ದಾಗ ಮಂಚಕ್ಕೆ ಕರೆದ್ರಂತೆ ಮಾವ: ದೂರು ದಾಖಲು

ಬೆಂಗಳೂರು: ನಿರಂತರ ಲೈಂಗಿಕ ಕಿರುಕುಳಕ್ಕೆ ಬೇಸತ್ತ ಸೊಸೆಯೊಬ್ಬರು ಮಾವನ ವಿರುದ್ಧ ಈಗ ದೂರು ನೀಡಿದ್ದಾರೆ.

ಶೃತಿ ಮಾವನಿಂದ ಲೈಂಗಿಕ ಕಿರುಕುಳಕ್ಕೆ ಒಳಗಾದ ಸೊಸೆ. ಕಿರುಕುಳದಿಂದ ಬೇಸತ್ತ ಶೃತಿ ಗಂಡ ರಘುನಂದನ್, ಮಾವ ವೆಂಕಟಪತಿ ಅತ್ತೆ ಉಷಾ ವಿರುದ್ಧ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ.

ಏನಿದು ಪ್ರಕರಣ?
2016 ಏಪ್ರಿಲ್ 27ರಂದು ರಘುನಂದನ್ ಜೊತೆ ಶೃತಿ ವಿವಾಹ ನಡೆದಿದ್ದು, ಈಗ ಪತಿ ಅಮೆರಿಕದಲ್ಲಿ ನೆಲೆಸಿದ್ದಾರೆ. ಗಂಡ ವಿದೇಶದಲ್ಲಿ ನೆಲೆಸಿರುವ ಹಿನ್ನೆಲೆಯಲ್ಲಿ ಶೃತಿ ಈಗ ಮಾವ ವೆಂಕಟಪತಿ, ಅತ್ತೆ ಉಷಾ ವೆಂಕಟಪತಿ ಜೊತೆ ಇಂದಿರಾನಗರದಲ್ಲಿ ನೆಲೆಸಿದ್ದಾರೆ. ಪತಿ ಇಲ್ಲದೇ ಇರುವ ಈ ಸಂದರ್ಭದಲ್ಲಿ ಮಾವ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಶೃತಿ ಆರೋಪಿಸಿದ್ದಾರೆ.

ಅತ್ತೆಯ ಬಳಿ ಹೇಳಿದರೆ ನನ್ನ ಗಂಡ ಹೇಳಿದಂತೆ ಕೇಳು ಎನ್ನುತ್ತಿದ್ದರು. ಪತಿಗೆ ಹೇಳಿದರೆ ನಾನು ಕರೆದುಕೊಂಡು ಹೋಗುವವರೆಗೆ ಸಹಕರಿಸು ಎಂದು ಹೇಳಿದ್ದಾರೆ. ಸಹಕರಿಸಿದ್ದರೆ ಕೊಲೆ ಬೆದರಿಕೆಯನ್ನು ಪತಿ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಮದುವೆ ವೇಳೆಯಲ್ಲಿ 40 ಗ್ರಾಂ ತೂಕದ 2 ಚಿನ್ನದ ಸರ, 12 ಗ್ರಾಂ ತೂಕದ ಒಂದು ಚಿನ್ನದ ಉಂಗುರ ಟೈಟಾನ್ ವಾಚ್, ಸೂಟ್, 2 ಕೆಜಿ 500 ಗ್ರಾಂ ಬೆಳ್ಳಿ ವರದಕ್ಷಿಣೆಯಾಗಿ ನೀಡಲಾಗಿತ್ತು. ಮದುವೆಯಾದ 1 ವಾರಕ್ಕೆ ಅಮೆರಿಕಾಗೆ ತೆರಳಿದ್ದ ಪತಿ ವೀಸಾ ಬಂದ ಬಳಿಕ ನನ್ನನ್ನು ಅಮೆರಿಕಗೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದರು. ಆದರೆ ಕರೆದುಕೊಂಡು ಹೋಗಿರಲಿಲ್ಲ. ಅಮೆರಿಕಾಗೆ ಕರೆದೊಯ್ಯುವಂತೆ ಕೇಳಿದ್ದಕ್ಕೆ 5 ಲಕ್ಷ ನಗದು, 2 ಲಕ್ಷ ಮೌಲ್ಯದ ಚಿನ್ನಾಭರಣಕ್ಕೆ ಪತಿ ಬೇಡಿಕೆ ಇಟ್ಟಿದ್ದರು ಎಂದು ಶೃತಿ ಆರೋಪಿಸಿದ್ದಾರೆ.

ನಾನು ಒತ್ತಾಯ ಮಾಡಿದ ಬಳಿಕ ಅಮೆರಿಕಗೆ ತೆರಳಿದೆ. ಈ ವೇಳೆ ತಂದೆ ತಾಯಿಯನ್ನು ಪತಿ ಅಮೆರಿಕಕ್ಕೆ ಕರೆಸಿಕೊಂಡಿದ್ದಾರೆ. ಅಮೆರಿಕಾದಲ್ಲೂ ನನ್ನ ಜೊತೆ ಮಾವ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ದೂರು ನೀಡಿದ್ದಾರೆ.

ಈ ಪ್ರಕರಣದಲ್ಲಿ ಸಾಕಷ್ಟು ಗೊಂದಲಗಳಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರ ವಿಚಾರಣೆಯ ಸಂದರ್ಭದಲ್ಲಿ ಅತ್ತೆ ಮಾವನ ವಿಚಾರಣೆಯೂ ನಡೆದಿದ್ದು, ತನಿಖೆಯ ನಂತವಷ್ಟೇ ಸತ್ಯಾಸತ್ಯತೆ ಅನಾವರಣವಾಗಬೇಕಿದೆ.