ಭುವನೇಶ್ವರ: ಒಡಿಶಾದ ಚದ್ರಶೇಖರಪುರ ಪ್ರದೇಶದ ಶ್ರೀ ವಿಹಾರ್ ನಲ್ಲಿ ಮಹಿಳಾ ವೈದ್ಯರೊಬ್ಬರ ಮೃತದೇಹ ಅನುಮಾನಾಸ್ಪದವಾಗಿ ಪತ್ತೆಯಾಗಿದೆ.
ಮನಸ್ವಿನಿ ಬಾರಿಕ್ ಮೃತ ಡಾಕ್ಟರ್ ಎಂದು ಗುರುತಿಸಲಾಗಿದೆ. ಇವರು ಖಾಸಗಿ ಆಸ್ಪತ್ರೆಯಲ್ಲಿ ಡಾಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮನಸ್ವಿನಿ ಮೂಲತಃ ಪಶ್ಚಿಮ ಒಡಿಶಾದವರಾಗಿದ್ದು, ಪತಿಯಿಂದ ವಿಚ್ಛೇದನ ಪಡೆದುಕೊಂಡು ಶ್ರೀ ವಿಹಾರ್ ನಲ್ಲಿ ಬಾಡಿಗೆ ಮನೆಯಲ್ಲಿ ಒಬ್ಬರೆ ವಾಸಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ಇಂದು ಬೆಳಗ್ಗೆ ತುಂಬಾ ಸಮಯವಾದರು ಮನಸ್ವಿನಿ ಮನೆಯಿಂದ ಹೊರಗೆ ಬಂದಿರಲಿಲ್ಲ. ಬಳಿಕ ನೆರೆಹೊರೆಯವರು ಬಾಗಿಲು ಬಡಿದಿದ್ದಾರೆ. ಆದರೆ ಮನೆಯಿಂದ ಯಾವುದೇ ಪ್ರತಿಕ್ರಿಯೇ ಬಂದಿಲ್ಲ. ನಂತರ ನೆರೆಹೊರೆಯವರು ಅನುಮಾನಗೊಂಡು ಬಾಗಿಲು ಮುರಿದು ಮನೆಯೊಳಗೆ ನುಗ್ಗಿದ್ದಾರೆ.
ಆಗ ಮನಸ್ವಿನಿ ಪ್ರಜ್ಞಾಹೀನ ಸ್ಥಿತಿಯಲ್ಲಿ ನೆಲದ ಮೇಲೆ ಬಿದ್ದಿರುವುದು ಕಂಡು ಬಂದಿದೆ. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಷ್ಟರಲ್ಲಿಯೇ ಅವರು ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿದ್ದಾರೆ ಅಂತ ಪೊಲೀಸರು ಹೇಳಿದ್ದಾರೆ.
ಈ ಬಗ್ಗೆ ಮಾಹಿತಿ ತಿಳಿದು ಪೊಲೀಸರು ಡಾಕ್ಟರ್ ಮನೆಗೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಪೊಲೀಸರಿಗೆ ಆಕೆ ಇದ್ದ ರೂಮಿನಲ್ಲಿ ಕೆಲವು ಚುಚ್ಚುಮದ್ದು ಮತ್ತು ಸಿರಿಂಜ್ ಗಳು ಪತ್ತೆಯಾಗಿದ್ದು, ಅವುಗಳನ್ನು ವಶಪಡಿಸಿಕೊಂಡಿದ್ದಾರೆ.
ಸದ್ಯಕ್ಕೆ ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ನಡೆಸುತ್ತಿದ್ದೇವೆ. ತನಿಖೆಯ ನಂತರ ಇದು ಕೊಲೆಯೋ ಅಥವಾ ಆತ್ಮಹತ್ಯೆ ಪ್ರಕರಣವೋ ಎಂಬ ಬಗ್ಗೆ ಖಚಿತ ಮಾಹಿತಿ ತಿಳಿಯುತ್ತದೆ ಎಂದು ಪೊಲೀಸರು ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv