ಬೆಂಗಳೂರು: ಗೃಹಿಣಿಯೊಬ್ಬರು ಅನುಮಾನಾಸ್ಪದವಾಗಿ ಸಾವನಪ್ಪಿದ್ದು, ಮೃತಳ ಪೋಷಕರು ವರದಕ್ಷಿಣೆಗಾಗಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ಪೊಲೀಸ್ ಠಾಣೆಗೆ ದೂರು ನೀಡಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದಲ್ಲಿ ನಡೆದಿದೆ.
ಜೀವಿತಾ(21) ಅನುಮಾನಾಸ್ಪದವಾಗಿ ಮೃತಪಟ್ಟ ಗೃಹಿಣಿ. ಆನೇಕಲ್ ಪಟ್ಟಣದ ಬಹದೂರ್ ಪುರ ನಿವಾಸಿ ಮೋಹನ್ ಎಂಬವನಿಗೆ 8 ತಿಂಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಆದರೆ ಗುರುವಾರ ಬೆಳಿಗ್ಗೆ ಆಸ್ಪತ್ರೆಯಲ್ಲಿ ಜೀವಿತಾ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ.
Advertisement
ಜೀವಿತಾ ಮದುವೆಯ ಸಂದರ್ಭದಲ್ಲಿ ಮೋಹನ್‍ಗೆ 120 ಗ್ರಾಂ ಚಿನ್ನ ಹಾಗೂ 75 ಸಾವಿರ ನಗದನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು. ಮದುವೆಯ ನಂತರ ಮೋಹನ್, ಅತ್ತೆ ಗೌರಮ್ಮ, ಮಾವ ನಾಗರಾಜು ಹಾಗೂ ನಾದಿನಿ ಶ್ವೇತಾ ಸೇರಿ ಹೆಚ್ಚಿನ ವರದಕ್ಷಿಣೆ ತರುವಂತೆ ಜೀವಿತಾಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಜೀವಿತಾಗೆ ಆರೋಗ್ಯ ಸಮಸ್ಯೆ ಇದ್ದುದ್ದರಿಂದ ಪೋಷಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ತವರಿಗೆ ಕರೆತಂದಿದ್ದರು. ಆದರೆ ಬುಧವಾರ ಮೋಹನ್ ಜೀವಿತಾಗೆ ಕರೆ ಮಾಡಿ ಮನೆಗೆ ಬರುವಂತೆ ತಿಳಿಸಿದ್ದ. ಜೀವಿತಾ ಒಲ್ಲದ ಮನಸ್ಸಿನಿಂದಲೇ ಗಂಡನ ಮನೆಗೆ ಹೋಗಿದ್ದರು.
Advertisement
Advertisement
ಗುರುವಾರ ಬೆಳಗ್ಗೆ ಮೋಹನ್ ಜೀವಿತಾ ಮನೆಯವರಿಗೆ ಫೋನ್ ಮಾಡಿ, ನಿಮ್ಮ ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು. ಆಸ್ಪತ್ರೆಗೆ ಸೇರಿಸಿದ್ದೀವೆ ಎಂದು ತಿಳಿಸಿದ್ದಾನೆ. ಆದ್ರೆ ಕುಟುಂಬದವರು ಆಸ್ಪತ್ರೆಗೆ ಹೋಗಿ ನೋಡಿದಾಗ ಜೀವಿತಾ ಮೃತಪಟ್ಟಿದ್ದರು.
Advertisement
ನಮ್ಮ ಮಗಳು ವರದಕ್ಷಿಣೆ ಕಿರುಕುಳಕ್ಕೆ ಬಲಿಯಾಗಿದ್ದಾಳೆ. ಮೋಹನ್ ಹಾಗೂ ಅವರ ಕುಟುಂಬದವರು ಸೇರಿ ಮಗಳನ್ನು ಕೊಂದಿದ್ದಾರೆ ಎಂದು ಆರೋಪಿಸಿ ಜೀವಿತಾ ಕುಟುಂಬದವರು ಆನೇಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ಪಡೆದ ಪೊಲೀಸರು ಮೋಹನ್ ಹಾಗೂ ಕುಟುಂಬದವರನ್ನು ವಶಕ್ಕೆ ಪಡೆದು ವಿಚಾರಣೆ ನೆಡೆಸುತ್ತಿದ್ದಾರೆ.