ವಿಜಯಪುರ: ಮತದಾನ ಮಾಡಲು ಆಗಮಿಸಿದ್ದ ಮಹಿಳೆ ಮೃತಪಟ್ಟಿರುವ ಘಟನೆ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ನಡೆದಿದೆ.
ಮಹಾದೇವಿ ಮಹಾದೇವಪ್ಪ ಸಿಂದಖೇಡ್ (55) ಮೃತಪಟ್ಟ ಮಹಿಳೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಐರಸಂಗ ಗ್ರಾಮದ ಮತಗಟ್ಟೆ 32ರಲ್ಲಿ ಈ ಘಟನೆ ನಡೆದಿದೆ.
ಇಂದು ಕರ್ನಾಟಕದ 14 ಕ್ಷೇತ್ರಗಳಲ್ಲಿ ಎರಡನೇ ಹಂತದ ಲೋಕಸಭಾ ಚುನಾವಣೆಯ ಮತದಾನ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಮಹಾದೇವಿ ಅವರು ಮತದಾನ ಮಾಡಲು ಬಂದಿದ್ದು, ವೋಟ್ ಮಾಡಿ ಮತಗಟ್ಟೆಯಿಂದ ಹೊರಗೆ ನಡೆದುಕೊಂಡು ಬಂದಿದ್ದಾರೆ. ಆದರೆ ಇದ್ದಕ್ಕಿದ್ದಂತೆ ಮಹಾದೇವಿ ಅವರು ಕುಸಿದು ಬಿದ್ದಿದ್ದಾರೆ.
ತಕ್ಷಣ ಅವರನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಹೃದಯಾಘಾತವಾಗಿ ಮಹಾದೇವಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಮತದಾನ ಮಾಡಿ ಬಂದು ಇದ್ದಕ್ಕಿದ್ದಂತೆ ಮೃತಪಟ್ಟಿದ್ದರಿಂದ ಆಸ್ಪತ್ರೆಯ ಆವರಣದಲ್ಲಿ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಈ ಘಟನೆ ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.