ಬೆಳಗಾವಿ: ಕಲ್ಲು ಗಣಿಗಾರಿಕೆ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದ ಮಹಿಳೆ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಗಣಿಗಾರಿಕೆ ನಡೆಸುತ್ತಿರುವ ಮಾಲೀಕರೇ ಮಹಿಳೆಯನ್ನ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಂದಿಕುರಳಿ ಗ್ರಾಮದ ಹೊರ ವಲಯದಲ್ಲಿರುವ ಕಲ್ಲು ಗಣಿಗಾರಿಕೆ ಯಂತ್ರವನ್ನು ಸ್ಥಗಿತಗೊಳಿಸಬೇಕು ಎಂದು ಬಹು ದಿನಗಳಿಂದ ಹೋರಾಟ ನಡೆಯುತ್ತಿದೆ. ಆದ್ರೆ ಮಂಗಳವಾರ ತಡರಾತ್ರಿ ಗಣಿಗಾರಿಕೆ ನಡೆಯುವ ಪ್ರದೇಶದಲ್ಲಿ ನಡೆದ ಗಲಾಟೆಯಲ್ಲಿ ರಹಮತ ಮುಲ್ತಾನಿ 34 ಎಂಬ ಮಹಿಳೆ ಕಾಲು ಜಾರಿ ಬಿದ್ದು ಗಾಯಗೊಂಡು ರಾಯಬಾಗ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.
ಇದರಿಂದ ಆಕ್ರೋಶಗೊಂಡ ರಹಮತ ಸಂಬಂಧಿಗಳು ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಮಾಲೀಕರೇ ಮಹಿಳೆಯನ್ನ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ರಾಯಬಾಗ ಪಟ್ಟಣದಲ್ಲಿ ಪ್ರತಿಭಟನೆಗೆ ಇಳಿದಿದ್ದಾರೆ. ರಾಯಬಾಗ ತಾಲೂಕಾ ಆಸ್ಪತ್ರೆ ಎದುರು ಪ್ರತಿಭಟನೆ ಜೋರಾದ ಹಿನ್ನೆಲೆಯಲ್ಲಿ ಪ್ರಕರಣದ ತೀವ್ರತೆಯನ್ನ ಅರಿತ ಬೆಳಗಾವಿ ಎಸ್ ಪಿ ಸುಧೀರ ಕುಮಾರ್ ರೆಡ್ಡಿ ತಕ್ಷಣವೇ ರಾಯಬಾಗ ಪಟ್ಟಣಕ್ಕೆ ಆಗಮಿಸಿ ತನಿಖೆ ಕೈಗೊಂಡಿದ್ದಾರೆ.
ಬೆಳಗ್ಗೆ ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನ ಗಮನಿಸಿ ಮಹಿಳೆ ಕೊಲೆಯಾಗಿಲ್ಲ. ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ಸ್ಪಷ್ಟಪಡಿಸಿದ್ದಾರೆ. ಎಸ್ ಪಿ ಅವರ ಹೇಳಿಕೆಯಿಂದ ಆಕ್ರೋಶಗೊಂಡ ಒಂದು ಕೋಮಿನ ಪ್ರತಿಭಟನಕಾರರು ನಮಗೆ ನ್ಯಾಯ ಸಿಗಲಿಲ್ಲ ಎಂದು ರಾಯಬಾಗ ಬಸ್ ನಿಲ್ದಾಣಕ್ಕೆ ತೆರಳಿ ಬಸ್ ಹಾಗೂ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ತಕ್ಷಣವೇ ಪೊಲೀಸರು ಲಾಠಿ ಚಾರ್ಜ್ ನಡೆಸಿ 20 ಕ್ಕೂ ಹೆಚ್ಚು ಜನರನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆಯಿಂದ ರಾಯಬಾಗ ಪಟ್ಟಣ ಅಘೋಷಿತ ಬಂದ್ ಆಗಿದ್ದು ಪಟ್ಟಣದಲ್ಲಿ ಬೂದಿ ಮುಚ್ಚಿದ ಕೆಂಡದಂತ ವಾತಾವರಣ ನಿರ್ಮಾಣವಾಗಿದೆ.
ರಾಯಬಾಗ ಪಟ್ಟಣದಾದ್ಯಂತ ಎಸ್ ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ರಾಯಬಾಗ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.