ಪುಣೆ: ಹುಂಜದ ಕಾಟಕ್ಕೆ ಬೇಸತ್ತ ಮಹಿಳೆಯೊಬ್ಬಳು ಅದರ ಮೇಲೆ ಕ್ರಮ ಕೈಗೊಳ್ಳಿ ಎಂದು ಪೊಲೀಸರ ಮೊರೆ ಹೋಗಿರುವ ವಿಚಿತ್ರ ಘಟನೆ ಪುಣೆಯಲ್ಲಿ ನಡೆದಿದೆ.
ಹೌದು. ವಿಚಿತ್ರ ಎನಿಸಿದರೂ ಇದು ನಿಜ. ಹುಂಜ ಕಾಟ ಕೊಡುತ್ತಿದೆ ಎಂದು ಪೊಲೀಸ್ ಠಾಣೆಗೆ ಬಂದ ಮಹಿಳೆ, ಹುಂಜ ಹಾಗೂ ಅದರ ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ್ದಾಳೆ.
ಪ್ರತಿದಿನ ಮನೆ ಮುಂದೆ ಬಂದು ಹುಂಜ ಕೂಗಿ ನನ್ನ ನಿದ್ರೆಯನ್ನು ಹಾಳು ಮಾಡುತ್ತಿದೆ. ಒಂದು, ಎರಡು ದಿನವಾದರೆ ಹೇಗೋ ಹುಂಜದ ಕಾಟ ತಡೆದುಕೊಳ್ಳಬಹುದಾಗಿತ್ತು. ಆದರೆ ಇದು ದಿನಾಲೂ ನನಗೆ ಕಾಟ ಕೊಡುತ್ತೆ. ಇದರಿಂದ ನನ್ನ ನಿದ್ರೆ ಹಾಳಾಗುತ್ತಿದೆ ಎಂದು ಮಹಿಳೆ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾಳೆ.
ದೂರು ನೀಡಿದ್ದ ಮಹಿಳೆ, ಸಹೋದರಿ ಮನೆಗೆ ಉಳಿಯಲು ಬಂದಾಗ ಈ ಘಟನೆ ನಡೆದಿದೆ. ಸ್ವಲ್ಪ ದಿನ ಸಹೋದರಿ ಮನೆಯಲ್ಲಿದ್ದ ಮಹಿಳೆ ಈಗ ತನ್ನ ಊರಿಗೆ ವಾಪಸ್ ಆಗಿದ್ದಾಳೆ. ಆದರೆ ಮಹಿಳೆ ದೂರಿನ ಆಧಾರದ ಮೇಲೆ ಪೊಲೀಸರು ಸಹೋದರಿ ಮನೆಗೆ ವಿಚಾರಣೆಗೆ ಹೋದಾಗ, ಮಹಿಳೆ ವಿಲಕ್ಷಣ ಸ್ವಭಾವದವಳು. ಹಾಗಾಗಿ ವಿಚಾರಣೆ ಬೇಡವೆಂದು ಸಹೋದರಿ ಪೊಲೀಸರಿಗೆ ಹೇಳಿದ್ದಾಳೆ. ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.