ಅಹಮದಾಬಾದ್: 32 ವರ್ಷದ ಮಹಿಳೆಯೊಬ್ಬರು ಗುಜರಾತ್‍ನ ಗಿರ್ ಅರಣ್ಯಪ್ರದೇಶದಲ್ಲಿ ಆಂಬುಲೆನ್ಸ್ ನೊಳಗೆ ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ. ಅಷ್ಟೆ ಅಲ್ಲ ಅಂದು ಅಮ್ರೇಲಿ ಜಿಲ್ಲೆಯ ಗ್ರಾಮವೊಂದರಲ್ಲಿ ನಿಲ್ಲಿಸಲಾಗಿದ್ದ ಈ ಆಂಬುಲೆನ್ಸ್ ಬಳಿ ಹತ್ತಿರದ ಕಾಡಿನಿಂದ 12 ಸಿಂಹಗಳು ಬಂದು ವಾಹನವನ್ನ ಸುತ್ತುವರಿದಿದ್ದವು ಎಂದರೆ ನೀವು ನಂಬಲೇಬೇಕು.
ಹೌದು. ಗುರುವಾರದಂದು ಮಧ್ಯರಾತ್ರಿ ಸುಮಾರು 2.30ರ ವೇಳೆಯಲ್ಲಿ ಇಲ್ಲಿನ ಲುನಾಸಾಪುರ್ ನಿವಾಸಿಯಾದ ಮಂಗುಬೆನ್ ಮಕ್ವಾನಾ ಅವರನ್ನ ಹೆರಿಗೆಗಾಗಿ ಜಾಫರ್‍ಬಾದ್ ಟೌನ್‍ನ ಸರ್ಕಾರಿ ಆಸ್ಪತ್ರೆಗೆ ಆಂಬುಲೆನ್ಸ್ ನಲ್ಲಿ ಕೊಂಡೊಯ್ಯಲಾಗ್ತಿತ್ತು. ಈ ವೇಳೆ ಮಹಿಳೆಗೆ ಹೆರಿಗೆ ನೋವು ತೀವ್ರವಾಗಿದ್ದು ಮಗುವಿನ ತಲೆ ಹೊರಗೆ ಬರ್ತಿದ್ರಿಂದ ಯಾವ ಕ್ಷಣದಲ್ಲಾದ್ರೂ ಹೆರಿಗೆಯಾಗುವ ಸಂಭವವಿತ್ತು. ಹೀಗಾಗಿ 108 ಆಂಬುಲೆನ್ಸ್ ನ ತುರ್ತು ನಿರ್ವಹಣಾ ತಂತ್ರಜ್ಞರಾದ ಅಶೋಕ್ ಮಕ್ವಾನಾ ಚಾಲಕ ರಾಜು ಅವರಿಗೆ ವಾಹನವನ್ನ ಅರ್ಧ ದಾರಿಯಲ್ಲೇ ನಿಲ್ಲಿಸಲು ಹೇಳಿದ್ರು ಎಂದು ಅಮ್ರೇಲಿಯ 108 ಆಂಬುಲೆನ್ಸ್ ನ ತುರ್ತು ನಿರ್ವಹಣಾ ಕಾರ್ಯನಿರ್ವಾಹಕ ಅಧಿಕಾರಿ ಚೇತನ್ ಗಾದೆ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.
Advertisement
Advertisement
ಬಳಿಕ ತಂತ್ರಜ್ಞ ಅಶೋಕ್, ಹೆರಿಗೆ ಮಾಡಿಸಲು ಸಲಹೆಗಾಗಿ ವೈದ್ಯರಿಗೆ ಕರೆ ಮಾಡಿದ್ರು. ಈ ವೇಳೆ ಮನುಷ್ಯರು ಇದ್ದಿದ್ದನ್ನು ಗ್ರಹಿಸಿದ ಸಿಂಹಗಳ ಹಿಂಡು ಹತ್ತಿರದ ಪೊದೆಗಳಿಂದ ಹೊರಬಂದು ಆಂಬುಲೆನ್ಸ್ ಸುತ್ತುವರಿದವು. ಸ್ಥಳೀಯರಾಗಿದ್ದ ಆಂಬುಲೆನ್ಸ್ ಚಾಲಕ ರಾಜು ಸಿಂಹಗಳ ವರ್ತನೆ ಬಗ್ಗೆ ತಿಳಿದುಕೊಂಡಿದ್ದರಿಂದ ಅವುಗಳನ್ನ ಬೆದರಿಸಲು ಪ್ರಯತ್ನಿಸಿದ್ರು. ಆದ್ರೆ ಸಿಂಗಹಳು ಮಾತ್ರ ಅಲ್ಲಿಂದ ಕದಲಲಿಲ್ಲ. ಕೆಲವು ಸಿಂಹಗಳು ವಾಹನದ ಮುಂದೆಯೇ ಕುಳಿತುಕೊಂಡು ರಸ್ತೆಯನ್ನ ಅಡ್ಡಗಟ್ಟಿದ್ವು ಎಂದು ಅವರು ಹೇಳಿದ್ದಾರೆ.
Advertisement
ಇಷ್ಟೆಲ್ಲಾ ಆಗ್ತಿದ್ರೂ ಆಂಬುಲೆನ್ಸ್ ಒಳಗೆ ತಂತ್ರಜ್ಞ ಅಶೋಕ್ ವೈದ್ಯರ ನಿರ್ದೇಶನದಂತೆ ಮಹಿಳೆಯ ಹೆರಿಗೆಗೆ ಸಹಾಯ ಮಾಡಿದ್ರು. ನಂತರ ಚಾಲಕ ರಾಜು ಗಾಡಿಯನ್ನ ಸ್ಟಾರ್ಟ್ ಮಾಡಿ ನಿಧಾನವಾಗಿ ಮುಂದೆ ಸಾಗಿದ್ರು. ಗಾಡಿ ಚಲಿಸಲು ಶುರು ಮಾಡಿದ್ದರಿಂದ ಹಾಗೂ ಆಂಬುಲೆನ್ಸ್ ಲೈಟ್‍ನ ಬೆಳಕಿನಿಂದಾಗಿ ಸಿಂಹಗಳು ರಸ್ತೆಯ ಪಕ್ಕಕ್ಕೆ ಹೋಗಿದ್ದು ಆಂಬುಲೆನ್ಸ್ ಗೆ ದಾರಿ ಮಾಡಿಕೊಟ್ಟವು ಎಂದು ಚೇತನ್ ವಿವರಿಸಿದ್ದಾರೆ.
Advertisement
ಸದ್ಯ ಮಹಿಳೆ ಹಾಗೂ ನವಜಾತ ಶಿಶುವನ್ನ ಜಫರಾಬಾದ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವರದಿಯಾಗಿದೆ.