ಶಿವಮೊಗ್ಗ: ಗಂಡ-ಅತ್ತೆ-ಮಾವನ ಕಾಟಕ್ಕೆ ನೊಂದ ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗ ತಾಲೂಕು ಆಯನೂರು ಹೋಬಳಿಯ ಮಂಡಘಟ್ಟದಲ್ಲಿ ನಡೆದಿದೆ.
ಮೂಲತಃ ಶಿಕಾರಿಪುರ ತಾಲೂಕಿನ ಹಿತ್ಲಾ ಗ್ರಾಮದ ಭಾಗ್ಯ ವಿಷ ಸೇವಿಸಿ ಮೃತಪಟ್ಟಿರುವ ಮಹಿಳೆ. ಈ ಸಾವಿನ ಬಗ್ಗೆ ಭಾಗ್ಯ ಅವರ ಅಣ್ಣ ದೊಡ್ಡಯ್ಯ ಕುಂಸಿ ಠಾಣೆಗೆ ದೂರು ನೀಡಿದ್ದಾರೆ.
ಭಾಗ್ಯರನ್ನು ಹತ್ತು ವರ್ಷದ ಹಿಂದೆ ಮಂಡಘಟ್ಟದ ಮಂಜಪ್ಪ ಎಂಬವರ ಮಗ ಚಂದ್ರಶೇಖರ್‍ಗೆ ಕೊಟ್ಟು ಮದುವೆ ಮಾಡಲಾಗಿತ್ತು. ಈ ದಂಪತಿಗೆ ಎಂಟು ಹಾಗೂ ಆರು ವರ್ಷದ ಇಬ್ಬರು ಮಕ್ಕಳಿದ್ದಾರೆ. ಮದುವೆ ಆದಾಗಿನಿಂದಲೂ ಗಂಡ ಚಂದ್ರೇಶೇಖರ, ಮಾವ ಮಂಜಪ್ಪ, ಅತ್ತೆ ಮಂಜಪ್ಪ ಕಿರುಕುಳ ಕೊಡುತ್ತಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಹಿಂದೆಯೂ ಕಿರುಕುಳ ನೀಡಿದ್ದಾಗ ಎರಡೂ ಕುಟುಂಬಗಳ ಹಿರಿಯರು ಹಾಗು ಗ್ರಾಮಸ್ಥರ ಸಮ್ಮುಖದಲ್ಲಿ ಪಂಚಾಯ್ತಿ ನಡೆದು, ಬುದ್ಧಿವಾದ ಹೇಳಲಾಗಿತ್ತು. ಆದರೂ ಗಂಡನ ಮನೆಯಲ್ಲಿ ಕಿರುಕುಳ ತಪ್ಪಿರಲಿಲ್ಲ. ಊಟ- ತಿಂಡಿ ಕೂಡ ಕೊಡದೇ ಉಪವಾಸ ಹಾಕಿದ್ದರು. ಇದರಿಂದ ತೀವ್ರವಾಗಿ ನೊಂದ ಭಾಗ್ಯ ಮಂಗಳವಾರ ಕ್ರಿಮಿನಾಶಕ ಸೇವಿಸಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಿದರೂ ಫಲಕಾರಿ ಆಗದೇ ಮೃತಪಟ್ಟಿದ್ದಾರೆ ಎಂದು ಸಹೋದರ ಹೇಳಿದ್ದಾರೆ.
ಕುಂಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತಲೆ ಮರೆಸಿಕೊಂಡಿರುವ ಗಂಡ ಚಂದ್ರಶೇಖರ, ಮಾವ ಮಂಜಪ್ಪ ಹಾಗೂ ಅತ್ತೆ ಮಂಜಮ್ಮ ಅವರ ಪತ್ತೆಗೆ ಬಲೆ ಬೀಸಿದ್ದಾರೆ.