– ಕಿಡ್ನಿ ದಂಧೆಗೆ ಮಂಡ್ಯದ ಮಹಿಳೆ ಬಲಿ
– ಮಧ್ಯವರ್ತಿಯಿಂದ ಮೋಸ ಹೋದ ಮಹಿಳೆ
ಮಂಡ್ಯ: ಕಿಡ್ನಿ ದಂಧೆ ರಾಜ್ಯದ ಕೆಲ ಆಸ್ಪತ್ರೆಗಳಲ್ಲಿ ನಡೆಸುತ್ತಿರುವುದನ್ನು ನೀವು ಕೇಳಿದ್ದೀರಿ. ಆದರೆ ಇಲ್ಲೊಬ್ಬ ಮಹಿಳೆ ತನ್ನ ಕಿಡ್ನಿ ಮಾರಿ ಮನೆ ಸಮಸ್ಯೆ ಬಗೆಹರಿಸಲು ಸಾಲ ಮಾಡಿ ಮಧ್ಯವರ್ತಿಯಿಂದ ಮೋಸ ಹೋಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮಳವಳ್ಳಿ ಪಟ್ಟಣದ ಗಂಗಾಮತ ಬೀದಿಯ ಮಲ್ಲಯ್ಯ ಪತ್ನಿ ವೆಂಕಟಮ್ಮ (48) ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ಮೃತ ವೆಂಕಟಮ್ಮ ಮಳವಳ್ಳಿ ಪಟ್ಟಣದಲ್ಲಿ ಸೊಪ್ಪು ಮಾರಿಕೊಂಡು ಜೀವನ ಸಾಗಿಸುತ್ತಿದ್ದರು. ತಾನು ಎಷ್ಟು ದಿನ ಕಷ್ಟ ಪಡುವುದು, ಶ್ರೀಮಂತೆಯಾಗಬೇಕು ಎಂದು ಕನಸು ಕಾಣುತ್ತಿದ್ದಾಗ ಅದೇ ಬೀದಿಯ ತಾರಾ ಎಂಬಾಕೆಯ ಪರಿಚಯವಾಗಿದೆ.
ವೆಂಕಟಮ್ಮಳಿಗೆ ತಾರಾ ಹಣದಾಸೆ ತೋರಿಸಿ ನಿನ್ನ ಕಿಡ್ನಿ ಮಾರಿದರೆ 30 ಲಕ್ಷ ರೂ. ಕೊಡುತ್ತಾರೆ. ನನಗೆ 3 ಲಕ್ಷ ರೂ. ಕಮಿಷನ್ ನೀಡಬೇಕು ಎಂದು ಒಪ್ಪಂದ ಮಾಡಿಕೊಂಡಿದ್ದಾಳೆ. ಬಳಿಕ ಮುಂಗಡವಾಗಿ 2 ಲಕ್ಷ ರೂ. ಕೊಡು ಎಂದು ಕೇಳಿದ್ದಾಳೆ. ಆಗ ಮೃತ ವೆಂಕಟಮ್ಮ ಸಾಲ ಮಾಡಿ ಹಣವನ್ನು ನೀಡಿದ್ದಳು ಎನ್ನಲಾಗಿದೆ. ವೆಂಕಟಮ್ಮ ಸಾಲಭಾದೆ ತಾಳಲಾರದೇ ಮತ್ತೆ ವಂಚಕಿ ಬಳಿ ಹೋಗಿ ನನ್ನ ಹಣವನ್ನು ವಾಪಸ್ ಕೊಡು ಎಂದು ಕೇಳಿದ್ದಾರೆ. ಆದರೆ ಮಹಿಳೆ ಹಣ ಕೊಡಲು ನಿರಾಕರಿಸಿದ್ದಾಳೆ.
ಈ ಮಧ್ಯೆ ಮೃತ ವೆಂಕಟಮ್ಮ ತನ್ನ ನೋವನ್ನು ಬೆಂಗಳೂರಿನಲ್ಲಿರುವ ಸಹೋದರಿನಿಗೆ ಹೇಳಿಕೊಂಡಿದ್ದು, ಆ ಸಮಯದಲ್ಲಿ ಅವರು ಸ್ಪಲ್ಪ ಹಣವನ್ನು ನೀಡಿ ಸಹಾಯ ಮಾಡಿದ್ದರು ಎಂದು ತಿಳಿದು ಬಂದಿದೆ. ಆದರೂ ಕಳೆದ ಎರಡು ದಿನಗಳ ಹಿಂದೆ ಮನಸ್ಸಿಗೆ ನೋವಾಗಿ ಮಳವಳ್ಳಿ ಪಟ್ಟಣ ದೊಡ್ಡಕೆರೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ವೆಂಕಟಮ್ಮ ರೀತಿಯೇ ಮತ್ತೋರ್ವ ಮಹಿಳೆಯೂ ಈ ವಂಚಕಿಗೆ 1.50 ಲಕ್ಷ ರೂ. ನೀಡಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ. ಈ ಸಂಬಂಧ ಇಬ್ಬರು ಪತಿಯಂದಿರು ಈ ಪ್ರಕರಣವನ್ನು ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿ ದಂಧೆಯನ್ನು ನಿಲ್ಲಿಸುವಂತೆ ದೂರು ನೀಡಿದ್ದಾರೆ.
ಈ ಸಂಬಂಧ ಮಳವಳ್ಳಿ ಪಟ್ಟಣದ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv