ಕಲಬುರಗಿ: ನೇಣು ಬಿಗಿದುಕೊಂಡು ಅನುಮಾನಸ್ಪದವಾಗಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಸಂಧ್ಯಾರಾಣಿ ಮೃತ ಗೃಹಿಣಿ. ಈಕೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಡೊಣಗಾಂವ್ ಗ್ರಾಮದವರಾಗಿದ್ದು, 2017 ರಲ್ಲಿ ಕಲಬುರಗಿ ಜಿಲ್ಲೆಯ ಕಮಲಾಪುರ ಪಟ್ಟಣದ ವಿನಯ್ ಜೊತೆ ಮದುವೆಯಾಗಿತ್ತು. ಮದುವೆ ಸಂದರ್ಭದಲ್ಲಿ ವರದಕ್ಷಿಣೆಯಾಗಿ ಇಪ್ಪತ್ತು ತೊಲ ಚಿನ್ನ, ಲಕ್ಷಾಂತರ ರೂಪಾಯಿ ಹಣ ನೀಡಿ ಅದ್ಧೂರಿಯಾಗಿ ವಿವಾಹವನ್ನ ಮಾಡಿಕೊಡಲಾಗಿತ್ತು.
Advertisement
ಬೆಂಗಳೂರಿನ ಕಂಪನಿಯೊಂದರಲ್ಲಿ ಒಳ್ಳೆಯ ಕೆಲಸವಿದೆ ಅಂತ ನಂಬಿಸಿ ಸಂಧ್ಯಾರಾಣಿಯನ್ನ ವರಿಸಿದ್ದನು. ಆದರೆ ಮದುವೆಯ ನಂತರ ಕೆಲವು ದಿನಗಳ ಪತ್ನಿಯೊಂದಿಗೆ ಅನ್ಯೋನ್ಯವಾಗಿದ್ದ ಪತಿ ವಿನಯ್, ಕೆಲವು ದಿನಗಳ ನಂತರ ಬೆಂಗಳೂರಿನಲ್ಲಿನ ಕೆಲಸವನ್ನ ಬಿಟ್ಟು ಕಲಬುರಗಿ ನಗರದ ಜಾಗೃತಿ ಕಾಲೋನಿಯಲ್ಲಿ ಪತ್ನಿ ಮತ್ತು ಕುಟುಂಬಸ್ಥರ ಜೊತೆಗೆ ವಾಸ ಮಾಡುತ್ತಾ ಫೋಟೋ ಡಿಸೈನಿಂಗ್ ಕೆಲಸ ಆರಂಭಿಸಿದ್ದನು.
Advertisement
Advertisement
ದಿನ ಕಳೆದಂತೆ ವಿನಯ್ ಕುಡಿತದ ಚಟಕ್ಕೆ ಬಿದ್ದು, ಕಂಠಪೂರ್ತಿ ಕುಡಿದು ಬಂದು ಪತ್ನಿ ಸಂಧ್ಯಾಳಿಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಡಲಾರಂಭಿಸಿದ್ದ. ಅಲ್ಲದೇ ಲಕ್ಷಾಂತರ ರೂಪಾಯಿ ಹಣ ಮತ್ತು ಚಿನ್ನ ಕೊಟ್ಟು ಮದುವೆ ಮಾಡಿಕೊಟ್ಟರೂ ಸಹ ಪೋಷಕರ ಜೊತೆಗೂಡಿ ತವರು ಮನೆಯಿಂದ ಮತ್ತಷ್ಟು ವರದಕ್ಷಿಣೆ ತೆಗೆದುಕೊಂಡು ಬಾ ಅಂತ ಹೊಡೆಯುತ್ತಿದ್ದನು. ಆದರೆ ನನ್ನ ಮಗಳು ಇವೆಲ್ಲ ಕಿರುಕುಳ ಸಹಿಸಿಕೊಂಡು ಪತಿಯೇ ಪರದೈವ ಅಂತ ಇದ್ಧಳು. ಆದರೆ ಶನಿವಾರ ರಾತ್ರಿ ನನ್ನ ಮಗಳು ರೂಮಿನಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ತಮ್ಮ ಮಗಳ ಸಾವಿಗೆ ಪತಿಯ ಮನೆಯವರೇ ಕಾರಣ ಅಂತ ಆಕ್ರೋಶ ವ್ಯಕ್ತಪಡಿಸಿದ್ದು, ಅವರೇ ಕೊಲೆ ಮಾಡಿದ್ದಾರೆ ಅಂತ ಆರೋಪಿಸಿದ್ದಾರೆ.
Advertisement
ಪತಿ ವಿನಯ್ ಎಂಬಿಎ ಪದವೀಧರನಾಗಿದ್ದು, ಪತ್ನಿ ಸಂಧ್ಯಾ ಕೂಡ ಬಿಸಿಎ ಕಂಪ್ಯೂಟರ್ ಸೈನ್ಸ್ ಮಾಡಿದ್ದಳು. ಪತಿಯ ಮನೆಯವರು ಇಷ್ಟೆಲ್ಲ ಕಿರುಕುಳ ಕೊಡುತ್ತಿದ್ದರು ಸಹ ಸಂಧ್ಯಾರಾಣಿ ತನ್ನ ಪೋಷಕರ ಮುಂದೆ ಬಾಯ್ಬಿಟ್ಟಿರಲಿಲ್ಲ. ಕೆಲವು ದಿನಗಳ ಹಿಂದೆ ನೋವು ತಾಳಲಾರದೇ ತಂದೆ ಧನರಾಜ್ ಬಳಿ ಪತಿಯ ಮನೆಯವರ ಚಿತ್ರಹಿಂಸೆಯ ಬಗ್ಗೆ ಹೇಳಿಕೊಂಡಿದ್ದಳು. ಹೀಗಾಗಿ ತಂದೆ ಶನಿವಾರ ಸಂಜೆಯಷ್ಟೆ ಮಗಳ ಮನೆಗೆ ಬಂದು ಅಳಿಯನ ಜೊತೆ ಸಂಧಾನ ಮಾತುಕತೆ ನಡೆಸಿದ್ದಾರೆ.
ಅಷ್ಟೇ ಅಲ್ಲದೇ ನಿಮಗೆ ಏನು ಬೇಕೋ ಅದನೆಲ್ಲ ಕೊಡುತ್ತೇನೆ ಅಂತ ಹೇಳಿ ನನ್ನ ಮಗಳನ್ನ ಸುಖವಾಗಿ ನೋಡಿಕೊಳ್ಳಿ ಅಂತಾ ಅಂಗಲಾಚಿ ಹೋಗಿದ್ದಾರೆ. ದುರಂತವೆಂದರೇ ತಂದೆ ಬಂದು ಹೋದ ಮಧ್ಯರಾತ್ರಿಯೇ ಸಂಧ್ಯಾರಾಣಿ ನೇಣು ಬಿಗಿದುಕೊಂಡು ಅನುಮಾನಸ್ಪದವಾಗಿ ಮೃತಪಟ್ಟಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದ ಎಮ್ಬಿ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಸಂಧ್ಯಾರಾಣಿಯ ಶವವನ್ನ ಮರಣೋತ್ತರ ಪರೀಕ್ಷೆಗೆಂದು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ.
ಪತ್ನಿಯ ಮನೆಯವರ ಕೊಲೆ ಆರೋಪವನ್ನ ನಿರಾಕರಿಸಿರುವ ಪತಿ ವಿನಯ್, ನಾನಾಗಲಿ ಅಥವಾ ನಮ್ಮ ತಂದೆ ತಾಯಿಯಾಗಲಿ ನನ್ನ ಪತ್ನಿಗೆ ಯಾವುದೇ ಕಿರುಕುಳ ಕೊಡುತ್ತಿರಲಿಲ್ಲ. ಅವಳನ್ನ ಹೂವಿನ ಹಾಗೇ ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದೇವು. ಕಳೆದ ರಾತ್ರಿ ಇಬ್ಬರು ಒಟ್ಟಿಗೆ ಊಟ ಮಾಡಿ ಅವಳು ರೂಮಿಗೆ ಹೋಗಿ ಮಲಗಿಕೊಂಡಿದ್ದಳು. ನಾನು ಹಾಲ್ ನಲ್ಲಿ ಮಲಗಿಕೊಂಡಿದ್ದೆನು. ಇದೇ ವೇಳೆಯಲ್ಲಿ ಆಕೆ ನನಗೆ ವಾಟ್ಸಪ್ ಮೂಲಕ ಬಾಯ್ ಗುಡ್ ನೈಟ್ ಅಂತ ಮೆಸೇಜ್ ಸಹ ಮಾಡಿದ್ದಾಳೆ. ಆದರೆ ಬೆಳಗಾಗೋದ್ರೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದರ ಬಗ್ಗೆ ನಮಗೆ ಏನು ಗೊತ್ತಿಲ್ಲ ಅಂತ ಹೇಳಿದ್ದಾನೆ.
ಈ ಬಗ್ಗೆ ಎಮ್ಬಿ ನಗರ ಠಾಣೆ ಪೊಲೀಸರು ಪ್ರಕರಣವನ್ನ ದಾಖಲಿಸಿಕೊಂಡಿದ್ದು, ಪತಿ ವಿನಯ್ ನನ್ನ ವಶಕ್ಕೆ ಪಡೆದು ವಿಚಾರಣೆಯನ್ನ ನಡೆಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv