ಹೈದರಾಬಾದ್: ಪತಿಯ ಕಿರುಕುಳಕ್ಕೆ ಬೇಸತ್ತು ಐದನೇ ಮಹಡಿಯಿಂದ ಹಾರಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ನಿರ್ಮಲ್ ಜಿಲ್ಲೆಯ ಶಾಸ್ತ್ರಿ ನಗರದಲ್ಲಿ ನಡೆದಿದೆ.
ಸೋನಿಕಾ ರೆಡ್ಡಿ (31) ಆತ್ಮಹತ್ಯೆಗೆ ಶರಣಾದ ಮಹಿಳೆ. ಮೂರು ವರ್ಷಗಳ ಹಿಂದೆ ಸೋನಿಕಾ ರೆಡ್ಡಿ ತಿಮ್ಮಪುರ್ ಗ್ರಾಮದ ನಿವಾಸಿ ಉಯ್ಮ ಕಿರಣ್ ರೆಡ್ಡಿ ಅವರನ್ನು ಮದುವೆಯಾಗಿದ್ದರು. ವಿವಾಹದ ನಂತರ ದಾಂಪತ್ಯ ಜೀವನ ಚೆನ್ನಾಗಿತ್ತು. ದಿನ ಕಳೆದಂತೆ ಪತಿ, ಸೋನಿಕಾ ರೆಡ್ಡಿಗೆ ಮಾನಸಿಕವಾಗಿ ಕಿರುಕುಳ ಕೊಡಲು ಪ್ರಾರಂಭಿಸಿದ್ದನು. ಪತಿಯ ವರ್ತನೆಯಿಂದ ಬೇಸತ್ತು ಸೋನಿಕಾ, ಶಾಸ್ತ್ರಿ ನಗರದಲ್ಲಿನ ತನ್ನ ತಂದೆಯ ಮನೆಗೆ ಹೋಗಿದ್ದರು ಎಂದು ಸರ್ಕಲ್ ಇನ್ಸ್ ಪೆಕ್ಟರ್ ಜಾನ್ ದಿವಾಕರ್ ಹೇಳಿದ್ದಾರೆ.
ಬುಧವಾರ ಅದೇ ಪ್ರದೇಶದಲ್ಲಿ ಅಪಾರ್ಟ್ ಮೆಂಟ್ ನಲ್ಲಿ ವಾಸಿಸುತ್ತಿದ್ದ ಸಂಬಂಧಿಕರನ್ನು ಭೇಟಿ ಮಾಡಲು ಅವರ ಮನೆಗೆ ಸೋನಿಕಾ ರೆಡ್ಡಿ ಹೋಗಿದ್ದಾರೆ. ಆದರೆ ಬಳಿಕ ಇದ್ದಕ್ಕಿದ್ದಂತೆ ಐದನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 5ನೇ ಮಹಡಿಯಿಂದ ಕೆಳಗೆ ಬಿದ್ದ ಪರಿಣಾಮ ತಲೆಗೆ ಗಂಭೀರವಾಗಿ ಪೆಟ್ಟಾಗಿದ್ದು, ಸ್ಥಳದಲ್ಲಿಯೇ ಸೋನಿಕಾ ರೆಡ್ಡಿ ಮೃತಪಟ್ಟಿದ್ದಾರೆ.
ಆತ್ಮಹತ್ಯೆಗೆ ಮುಂಚೆ ತನ್ನ ಪಾದರಕ್ಷೆಗಳನ್ನು, ಹ್ಯಾಂಡ್ ಬ್ಯಾಗನ್ನು ಪಕ್ಕದಲ್ಲಿಟ್ಟಿರುವುದು ಕಂಡು ಬಂದಿದೆ. ಈ ಘಟನೆಯ ಬಗ್ಗೆ ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಬಂದು ಪರಿಶಿಲನೆ ನಡೆಸಿದ್ದಾರೆ. ಕೂಲ್ ಡ್ರಿಂಕ್ಸ್ ಬಾಟಲ್ ಟೆರೇಸ್ ಮೇಲೆ ಪತ್ತೆಯಾಗಿರುವುದಿಂದ ಮೃತ ಸೋನಿಕಾ ರೆಡ್ಡಿ ತಂಪಾದ ಪಾನೀಯದಲ್ಲಿ ಕೀಟನಾಶಕವನ್ನು ಬೆರೆಸಿ ಸೇವಿಸಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಸದ್ಯಕ್ಕೆ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಯನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv