ಚಿಕ್ಕಮಗಳೂರು: ಎಂಟು ತಿಂಗಳ ಹಿಂದೆ ಮದುವೆಯಾಗಿದ್ದ ವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ನೇರಲಕೆರೆ ಗ್ರಾಮದಲ್ಲಿ ನಡೆದಿದೆ.
ಮೃತಳನ್ನ 20 ವರ್ಷದ ಕಾವ್ಯ ಎಂದು ಗುರುತಿಸಲಾಗಿದೆ. ಕಾವ್ಯ ಎಂಟು ತಿಂಗಳ ಹಿಂದೆ ಪ್ರಸನ್ನ ಎಂಬವನನ್ನ ಮದುವೆಯಾಗಿದ್ದಳು. ಆದರೆ ಸೋಮವಾರ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮೃತ ಕಾವ್ಯಳ ಮೈಮೇಲಿನ ಗಾಯ ಹಾಗೂ ರಕ್ತ ಹೆಪ್ಪುಗಟ್ಟಿರೋದನ್ನ ಗಮನಿಸಿದರೆ ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಶಂಕಿಸಲಾಗಿದೆ. ಮೃತ ಕಾವ್ಯಳ ಪೋಷಕರು ಕೂಡ ಹೊಡೆದು ಕೊಲೆ ಮಾಡಿ ಅನುಮಾನ ಬಾರದಂತೆ ನೇಣು ಹಾಕಿದ್ದಾರೆಂದು ಆರೋಪಿಸಿದ್ದಾರೆ. ಇತ್ತ ಪತಿ ಪ್ರಸನ್ನ ಕೂಡ ನಾಪತ್ತೆಯಾಗಿರುವುದರಿಂದ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಘಟನೆಯ ಬಗ್ಗೆ ಮಾಹಿತಿ ತಿಳಿದು ತರೀಕೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಲೆಮರೆಸಿಕೊಂಡಿರುವ ಪ್ರಸನ್ನನಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.