– ತಾಯಿ ಮಕ್ಕಳ ಸಾವಿನಿಂದ ಮನನೊಂದ ತಂದೆಯೂ ಆತ್ಮಹತ್ಯೆ
ಗುಂಟೂರು: ತನ್ನ ಏಳು ವರ್ಷದ ಮಗಳ ಹುಟ್ಟುಹಬ್ಬದ ದಿನದಂದೇ ಮಕ್ಕಳನ್ನು ರೈಲ್ವೇ ಟ್ರ್ಯಾಕ್ ನಲ್ಲಿ ರೈಲಿನ ಮುಂದೆ ಎಸೆದು ಬಳಿಕ ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆಯೊಂದು ನಡೆದಿದೆ.
ಈ ಘಟನೆ ಸೋಮವಾರ ನರಸಾರೊಪೆಟ್ ಎಂಬಲ್ಲಿ ನಡೆದಿದೆ. ಮೃತರನ್ನು ತಾಯಿ ವಿಜಯಲಕ್ಷ್ಮೀ(32) ಹಾಗೂ ಮಕ್ಕಳಾದ ದಿಗ್ವಿಜಯ(7), ಸಾಯಿಗಣೇಶ್(4) ಎಂದು ಗುರುತಿಸಲಾಗಿದೆ. ಮೃತ ವಿಜಯಲಕ್ಷ್ಮೀ ಅವರು ಪಂಗಲೂರು ಮಂದಲ್ ನ ರಾಮಕುರು ಗ್ರಾಮದ ಪೆನುಬೋತ್ ಸೋಮಶೇಖರ್(40) ಎಂಬವರನ್ನು 2008ರಲ್ಲಿ ಮದುವೆಯಾಗಿದ್ದರು.
ಏನಿದು ಘಟನೆ?: ಸೋಮವಾರ ಮಗಳು ದಿಗ್ವಿಜಯಳ ಹುಟ್ಟು ಹಬ್ಬವಾಗಿತ್ತು. ಹೀಗಾಗಿ ವಿಜಯಲಕ್ಷ್ಮಿ ಅವರು ನಿನ್ನೆ ಶಾಲೆಗೆ ತೆರಳಿ ತನ್ನಿಬ್ಬರು ಮಕ್ಕಳನ್ನು ಶಾಪಿಂಗ್ ಮಾಡಲೆಂದು ಕರೆದುಕೊಂಡು ಬಂದಿದ್ದರು. ಅಂತೆಯೇ ಮಗಳ ಹುಟ್ಟುಹಬ್ಬವಾಗಿದ್ದರಿಂದ ಫೋಟೋ ತೆಗೆಸಿಕೊಳ್ಳೋಣ ಎಂದು ಸ್ಟುಡಿಯೋಗೆ ತೆರಳಿ ಮೂವರ ಗ್ರೂಪ್ ಫೋಟೋ ತೆಗೆಸಿಕೊಂಡಿದ್ದಾರೆ. ಅಲ್ಲದೇ ಆ ಕೂಡಲೇ ಸಿಕ್ಕ ಫೋಟೋದ ಹಿಂಬದಿಯಲ್ಲಿ ಮೂವರ ಹೆಸರನ್ನು ಕೂಡ ತಾಯಿ ಬರೆದ್ರು. ನಂತರ ಅಲ್ಲಿಂದ ಸೀದಾ ರೈಲ್ವೇ ಟ್ರ್ಯಾಕ್ ಬಳಿ ಮೂವರು ಹೋಗಿದ್ದಾರೆ.
ರೈಲ್ವೇ ಟ್ರ್ಯಾಕ್ ಬಳಿ ಮಗಳು ಓಡಿ ಹೋಗದಂತೆ ತಾಯಿ ಆಕೆಯ ಕಾಲುಗಳನ್ನು ಹಗ್ಗದಿಂದ ಬಿಗಿಯಾಗಿ ಕಟ್ಟಿದ್ದಾರೆ. ನಂತರ ತನ್ನ ಪತಿಗೆ ಕರೆ ಮಾಡಿ ಮಕ್ಕಳೊಂದಿಗೆ ತಾನೂ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ. ಹೀಗೆ ಗಂಡನಿಗೆ ಮಾಹಿತಿ ನೀಡಿ ಫೋನ್ ಕಟ್ ಮಾಡಿದ ಮಹಿಳೆ, ತನ್ನಿಬ್ಬರು ಮಕ್ಕಳನ್ನು ರೈಲ್ವೇ ಹಳಿಗೆ ಬಿಸಾಕಿ, ಬಳಿಕ ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯಿಂದಾಗಿ ತಾಯಿ ಹಾಗೂ ಇಬ್ಬರು ಮಕ್ಕಳೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇತ್ತ ತಾಯಿ-ಮಕ್ಕಳ ಆತ್ಮಹತ್ಯೆಯ ಸುದ್ದಿ ಇಡೀ ಗ್ರಾಮಕ್ಕೆ ಹಬ್ಬುತ್ತಿದ್ದಂತೆಯೇ ಮೃತ ಮಹಿಳೆಯ ಪತಿ ಸೋಮಶೇಖರ್ ಅವರು, ತನ್ನ ತಂದೆಯ ಬಳಿಯಿಂದ 200ರೂ. ತೆಗೆದುಕೊಂಡು ಕೀಟನಾಶಕ ಬಾಟಲಿಯನ್ನು ಅಂಗಡಿಯಿಂದ ಖರೀದಿ ಮಾಡಿದ್ದಾರೆ. ಅಂಗಡಿಯಿಂದ ನೇರವಾಗಿ ಮಿಲ್ ಗೆ ಬಂದ ಸೋಮಶೇಖರ್, ಕೀಟನಾಶಕವನ್ನು ಕುಡಿದಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ.
ಈ ಕುಟುಂಬಕ್ಕೆ ಯಾವುದೇ ಆರ್ಥಿಕ ಸಮಸ್ಯೆ ಅಥವಾ ಆತ್ಮಹತ್ಯೆ ಮಾಡಿಕೊಳ್ಳುವಂತಹ ಯಾವುದೇ ಸಮಸ್ಯೆಗಳಿರಲಿಲ್ಲ. ಒಟ್ಟಿನಲ್ಲಿ ಮಗಳ ಹುಟ್ಟುಹಬ್ಬದಂದೇ ತಾಯಿ ಈ ನಿರ್ಧಾರ ತೆಗೆದುಕೊಂಡು ಮಕ್ಕಳನ್ನು ಸಾಯಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಕಾರಣ ತಿಳಿದುಬಂದಿಲ್ಲ.
ಸದ್ಯ ಪ್ರಕರಣದ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.