ನವದೆಹಲಿ: ಪೆಟ್ಟಿಗೆಯೊಂದರಲ್ಲಿ ಸುಮಾರು 30 ಹೆಬ್ಬಾವುಗಳು (Python) ಸೇರಿದಂತೆ ಅಪರೂಪದ ಇತರ ಪ್ರಾಣಿಗಳನ್ನು ರೈಲಿನ ಮೂಲಕ (Train) ಸಾಗಿಸುತ್ತಿದ್ದ ಮಹಿಳೆ (Woman) ಅಧಿಕಾರಿಗಳ ಕೈಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ. ಮಹಿಳೆ ಸುಮಾರು 50 ಕೋಟಿ ರೂ. ಬೆಲೆಬಾಳುವ ಪ್ರಾಣಿಗಳನ್ನು ಸಾಗಿಸುತ್ತಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರ ಅತಿಥಿಯಾಗಿರುವ ಮಹಿಳೆ ಪುಣೆ ಮೂಲದ ದೇವಿ ಚಂದ್ರ ಎಂಬುದು ತಿಳಿದುಬಂದಿದೆ. ಆಕೆ ಖರಗ್‌ಪುರದ ಹಿಜ್ಲಿಯಿಂದ ದೆಹಲಿಗೆ ನೀಲಾಚಲ ಎಕ್ಸ್‌ಪ್ರೆಸ್ (Neelachal Express) ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದಾಳೆ.
ರಹಸ್ಯ ಮೂಲಗಳಿಂದ ಮಾಹಿತಿ ಪಡೆದ ರೈಲ್ವೇ ಪೊಲೀಸರು ಹಾಗೂ ಅರಣ್ಯ ಇಲಾಖೆಯ ತಂಡ ನೀಲಾಚಲ ಎಕ್ಸ್ಪ್ರೆಸ್ ರೈಲಿನ ಮೇಲೆ ದಾಳಿ ನಡೆಸಿದೆ. ಈ ವೇಳೆ ಮಹಿಳೆ ತಂದಿದ್ದ ಸಾಮಾನ್ಯ ಪೆಟ್ಟಿಗೆಯನ್ನು ತೆರೆದು ನೋಡಿದಾಗ ಸಹ ಪ್ರಯಾಣಿಕರು ದಂಗಾಗಿದ್ದಾರೆ. ಪೆಟ್ಟಿಗೆಯಲ್ಲಿ 30 ಹೆಬ್ಬಾವು, ಜೇಡಗಳು, ಗೋಸುಂಬೆಗಳು, ಜೀರುಂಡೆ ಹೀಗೆ ಅನೇಕ ಜಾತಿಯ ಪ್ರಾಣಿಗಳು ಪತ್ತೆಯಾಗಿವೆ. ಈ ಎಲ್ಲಾ ಪ್ರಾಣಿಗಳೂ ಅತ್ಯಂತ ಅಪರೂಪದ ಪ್ರಭೇದಕ್ಕೆ ಸೇರಿದ್ದಾಗಿದ್ದು, ದುಬಾರಿ ಬೆಲೆಯದ್ದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ ವೇಳೆ ಕಾಂಗ್ರೆಸ್ ಮುಖಂಡ ಹೃದಯಾಘಾತದಿಂದ ನಿಧನ
ಮಹಿಳೆಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಈ ಎಲ್ಲಾ ಪ್ರಾಣಿಗಳನ್ನು ನಾಗಾಲ್ಯಾಂಡ್‌ನಿAದ ತರಿಸಲಾಗಿರುವುದು ತಿಳಿದುಬಂದಿದೆ. ನಾಗಾಲ್ಯಾಂಡ್‌ನ ವ್ಯಕ್ತಿ ಈ ಅಪರೂಪದ ಪ್ರಭೇದಗಳನ್ನು ಪೂರೈಸುವ ಕೆಲಸವನ್ನು ಮಹಿಳೆಗೆ ನೀಡಿದ್ದಾನೆ. ಆಕೆಗೆ ಈ ಪ್ರಾಣಿಗಳ ಜಾತಿಯಾಗಲೀ, ಅದರ ಮೌಲ್ಯವಾಗಲೀ ತಿಳಿದಿಲ್ಲ. ಕೇವಲ 8 ಸಾವಿರ ರೂ.ಗಾಗಿ ಈ ಅಕ್ರಮ ಸಾಗಾಟವನ್ನು ಮಾಡುತ್ತಿದ್ದುದಾಗಿ ಮಹಿಳೆ ಬಾಯಿಬಿಟ್ಟಿದ್ದಾಳೆ.
ತಜ್ಞರ ಪ್ರಕಾರ ಪೆಟ್ಟಿಗೆಯಲ್ಲಿ ಪತ್ತೆಯಾಗಿರುವ ಹಾವುಗಳಲ್ಲಿ ಸ್ಯಾಂಡ್ ಬೋವಾಸ್, ಅಲ್ಬಿನೋ ಹೆಬ್ಬಾವು, ಬಾಲ್ ಹೆಬ್ಬಾವು ಮತ್ತು ರೆಡ್ ಹೆಬ್ಬಾವು ಸೇರಿವೆ. ವಿಷಕಾರಿ ಜೇಡಗಳು, ಅಪರೂಪದ ಗೋಸುಂಬೆಗಳನ್ನೂ ಆಕೆ ಸಾಗಿಸುತ್ತಿದ್ದಳು. ಇದೀಗ ಎಲ್ಲಾ ಪ್ರಾಣಿಗಳನ್ನು ರಕ್ಷಣೆ ಮಾಡಲಾಗಿದ್ದು, ಅವುಗಳನ್ನು ಅರಣ್ಯ ಇಲಾಖೆಗೆ ಒಪ್ಪಿಸಲಾಗಿದೆ. ಇದನ್ನೂ ಓದಿ: ಜ್ವರಕ್ಕೆ ಚುಚ್ಚು ಮದ್ದು ತೆಗೆದುಕೊಂಡ ಬಾಲಕ ಸಾವು – ನಕಲಿ ವೈದ್ಯ ಅರೆಸ್ಟ್