ದಾವಣಗೆರೆ: ಮನೆಯಲ್ಲಿ ಮಹಿಳೆ ಒಬ್ಬಳೇ ಇದ್ದ ಸಮಯದಲ್ಲಿ ದುಷ್ಕರ್ಮಿಗಳು ಮನೆಗೆ ನುಗ್ಗಿ ಆಕೆಯ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಬಿ.ಟಿ.ಬಡಾವಣೆಯಲ್ಲಿ ನಡೆದಿದೆ.
ಬಿ.ಟಿ.ಬಡಾವಣೆಯ ನಿವಾಸಿ ಬಸವರಾಜ್ ಅವರ ಪತ್ನಿ, ವಿಶಾಲಾಕ್ಷಿ (40) ಮೃತ ದುರ್ದೈವಿ. ಬಸವರಾಜ್ ಫೈನಾನ್ಸ್ ಮಾಡುತ್ತಿದ್ದರು. ಕೆಲಸದ ನಿಮಿತ್ತ ಅವರು ಶನಿವಾರ ಸಂಜೆ ತನ್ನ ಸ್ನೇಹಿತನೊಂದಿಗೆ ಮನೆಯಿಂದ ಹೊರ ಹೋಗಿದ್ದರು. ಸಂಜೆ ವಾಪಾಸ್ ಮನೆಗೆ ಬಂದು ನೋಡಿದಾಗ ಪತ್ನಿ ವಿಶಾಲಾಕ್ಷಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ದಂಗಾಗಿದ್ದಾರೆ.
ಘಟನೆಯಿಂದಾಗಿ ಇಡೀ ದಾವಣಗೆರೆ ನಗರವೇ ಬೆಚ್ಚಿ ಬಿದಿದ್ದೆ. ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಆಜಾದ್ ನಗರ ಪೊಲೀಸರು ಪತಿ ಬಸವರಾಜ್‍ನನ್ನು ತೀವ್ರ ವಿಚಾರಣೆ ನಡೆಸಿದ್ದಾರೆ. ಮೃತ ದೇಹದ ಪಕ್ಕದಲ್ಲಿ ಇದ್ದ ಚಾಕು ಹಾಗೂ ಮನೆಯ ಹೊರ ಭಾಗದ ಗೋಡೆಯಲ್ಲಿ ರಕ್ತ ಸಿಕ್ತ ವ್ಯಕ್ತಿಯ ಹಸ್ತದ ಗುರುತು ಪತ್ತೆಯಾಗಿದೆ.
ಹಣ ಅಥವಾ ಬಂಗಾರದ ಆಸೆಗಾಗಿ ಮಹಿಳೆಯನ್ನು ಕೊಲೆ ಮಾಡಿಲ್ಲ. ಬದಲಾಗಿ ಹಳೇ ದ್ವೇಷದ ಹಿನ್ನೆಲೆಯಲ್ಲಿ ವಿಶಾಲಾಕ್ಷಿಯನ್ನು ಕೊಲೆ ಮಾಡಲಾಗಿದೆಯೋ ಅಥವಾ ಬಸವರಾಜ್ ಫೈನಾನ್ಸ್ ವಿಚಾರವಾಗಿ ಯಾರಾದರೂ ಆಕೆಯನ್ನು ಕೊಲೆ ಮಾಡಿದ್ದಾರೋ ಎಂಬ ಅನುಮಾನವಿದೆ. ಆದ್ದರಿಂದ ಪೊಲೀಸರು ಗಂಭೀರವಾಗಿ ತನಿಖೆ ನಡೆಸುತ್ತಿದ್ದಾರೆ. ಇನ್ನು ವಿಶಾಲಾಕ್ಷಿಯನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಈ ಸಂಬಂಧ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕಾಗಮಿಸಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದ್ದೇಶ್ ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ.
ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ. ಈಗಾಗಲೇ ಪತಿಯನ್ನು ವಿಚಾರಣೆಗೆ ಒಳಪಡಿಸಿದ್ದೇವೆ. ಎಲ್ಲಾ ಆಯಾಮಗಳಲ್ಲೂ ಕೂಡ ತನಿಖೆ ನಡೆಯುತ್ತಿದ್ದು, ಕೂಡಲೇ ಆರೋಪಿಗಳನ್ನು ಪತ್ತೆ ಹಚ್ಚುವುದಾಗಿ ಅವರು ಭರವಸೆ ನೀಡಿದ್ದಾರೆ.