ಚಿತ್ರದುರ್ಗ: ಪತಿಯ ಸಹೋದರನ ಕಿರುಕುಳ ತಾಳಲಾರದೆ ಮಹಿಳೆ ನೇಣಿಗೆ ಶರಣಾದ ಘಟನೆ ಚಿತ್ರದುರ್ಗ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ.
ಜ್ಯೋತಿ(40) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಜ್ಯೋತಿ ಮೃತದೇಹದ ಬಳಿ ಡೆತ್‍ನೋಟ್ ಪತ್ತೆಯಾಗಿದ್ದು, ಅದರಲ್ಲಿ ದಾವಣಗೆರೆ ಬಿಜೆಪಿ ಸಂಸದ ಜಿ.ಎಂ ಸಿದ್ದೇಶ್ವರ್ ಕಾರು ಚಾಲಕನಾಗಿರುವ ಪ್ರಭುಲಿಂಗನೇ ತಮ್ಮ ಸಾವಿಗೆ ಕಾರಣ ಎಂದು ಬರೆಯಲಾಗಿದೆ.
ಡೆತ್‍ನೋಟ್‍ನಲ್ಲಿ, ಪ್ರಭುಲಿಂಗ ನಮ್ಮ ಮನೆಗೆ ವಿದ್ಯುತ್, ನೀರು ಸರಬರಾಜು ಕಡಿತಗೊಳಿಸಿ ಕಿರುಕುಳ ನೀಡುತ್ತಿದ್ದ. ಹೀಗಾಗಿ ಆತನ ದರ್ಪ, ದೌರ್ಜನ್ಯ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದಿದ್ದಾರೆ. ಜ್ಯೋತಿ ಟೇಬಲ್ ಮೇಲೆ ಮೊಬೈಲ್ ಹಾಗು ಡೆತ್‍ನೋಟನ್ನು ಇಟ್ಟು ಸಾವಿಗೀಡಾಗಿದ್ದಾರೆ.
ಪ್ರಭುಲಿಂಗನ ಕಿರುಕುಳ ತಾಳಲಾರದೇ ಈ ಹಿಂದೆಯೂ ಹಲವರು ಸಂಸದ ಸಿದ್ದೇಶ್ವರ ಅವರ ಗಮನಕ್ಕೆ ಈ ವಿಚಾರವನ್ನು ತಂದಿದ್ದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಜೊತೆಗೆ ಸಜ್ಜನರ ಜೊತೆ ಇರುವವರು ಸರಳ ಹಾಗು ಸಜ್ಜನಿಕೆಯನ್ನು ಅವರ ಬದುಕಿಗೂ ಅಳವಡಿಸಿಕೊಳ್ತಾರೆ ಎಂದು ಎಲ್ಲರು ಭಾವಿಸಿದ್ದಾರೆ. ಆದರೆ ಈ ಪ್ರಭುಲಿಂಗ ಮಾತ್ರ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ, ನನ್ನೊಂದಿಗೆ ಹಿರಿಯ ಬಿಜೆಪಿ ಸಂಸದರ ಬೆಂಬಲವಿದೆ ಎಂಬ ಅಹಂನೊಂದಿಗೆ ಸಂಬಂಧಿಗಳೆಲ್ಲರ ಮೇಲೂ ದೌರ್ಜನ್ಯ ವೆಸಗುತ್ತಾನೆ ಎಂಬ ಆರೋಪ ಸಹ ಆತನ ಮೇಲೆ ಕೇಳಿ ಬಂದಿತ್ತು.
ಇದೀಗ ಅಮಾಯಕ ಮಹಿಳೆ ಸಾವಿಗೆ ಕಾರಣವಾಗಿರುವ ಪ್ರಭುಲಿಂಗನನ್ನು ಬಂಧಿಸುವಂತೆ ಆಗ್ರಹಿಸಿ ಮೃತ ಜ್ಯೋತಿ ಸಂಬಂಧಿಗಳು ಪ್ರತಿಭಟಿಸಿದರು. ಈ ಸಂಬಂಧ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಕೂಡ ತನಿಖೆ ಮುಂದುವರಿಸಿದ್ದಾರೆ.