ಬೆಂಗಳೂರು: ಗೋಣಿ ಚೀಲ ಒಣಗಾಕುವ ವಿಚಾರಕ್ಕೆ ಕಿರಿಕ್ ತೆಗೆದು ಮಹಿಳೆ ಮೇಲೆ ನೆರೆಮನೆಯವರು ಮಚ್ಚಿನಿಂದ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಸುಬ್ರಮಣ್ಯಪುರದ ವಸಂತಪುರದಲ್ಲಿ ನಡೆದಿದೆ.
ಹಲ್ಲೆಗೊಳಗಾದ ಮಹಿಳೆಯನ್ನು ಅಮುದಾ ಎಂದು ಗುರುತಿಸಲಾಗಿದೆ. ತುಳಸಿ ಮಂಟಪದ ಮೇಲೆ ಗೋಣಿ ಚೀಲ ಹಾಕಿದ್ದ ನೆರೆಮನೆಯವರಿಗೆ ಗೋಣಿ ಚೀಲವನ್ನು ತೆಗೆಯುವಂತೆ ಹೇಳಿದ್ದಕ್ಕೆ ಅಮುದಾ ಮೇಲೆ ಮಚ್ಚಿನಿಂದ ತಲೆ ಹಾಗೂ ಭುಜಕ್ಕೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಅಲ್ಲದೇ ಅಮುದ ತಲೆಯಿಂದ ರಕ್ತ ಸುರಿಯುತ್ತಿದ್ದರೂ ಸಹಾಯಕ್ಕೆ ಬಾರದೇ ಸ್ಥಳೀಯರು ಅಮಾನವೀಯತೆ ತೋರಿದ್ದಾರೆ.
ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಎಫ್‍ಐಆರ್ ದಾಖಲಾಗಿದ್ದರೂ ಆರೋಪಿಗಳನ್ನು ಪೊಲೀಸರು ಇನ್ನೂ ಬಂಧಿಸಿಲ್ಲ. ಸದ್ಯ ನೆರೆ ಮನೆಯ ವಿಜಯಲಕ್ಷ್ಮೀ, ಕುಮಾರ್, ವಿಶಾಲ್ ಈ ಕೃತ್ಯ ಎಸಗಿದ್ದು, ದಿನನಿತ್ಯ ಮನೆ ಬಳಿ ಮಹಿಳೆಯೊಂದಿಗೆ ಜಗಳ ಆಡುವುದು, ಮನೆ ಮುಂದೆ ನಿಲ್ಲಿಸಿರುವ ಬೈಕ್‍ಗೆ ಬೆಂಕಿ ಹಚ್ಚುವುದು, ಮನೆಯ ಕಿಟಕಿ ಗ್ಲಾಸ್‍ಗೆ ಕಲ್ಲಿನಿಂದ ಹೊಡೆಯುವುದು ಹೀಗೆ ಅನೇಕ ತೊಂದರೆಗಳನ್ನು ನೀಡುತ್ತಿರುತ್ತಾರೆ.
ಇದೀಗ ಮನನೊಂದ ಅಮುದಾ ಕುಟುಂಬಸ್ಥರು ನ್ಯಾಯಕ್ಕಾಗಿ ಸುಬ್ರಮಣ್ಯ ಪೊಲೀಸರ ಮೊರೆಹೋಗಿದ್ದರು. ಪೊಲೀಸರು ಮಾತ್ರ, ನೊಂದವರ ಸಹಾಯಕ್ಕೆ ಬಂದಿಲ್ಲ. ಇದನ್ನೂ ಓದಿ: ಸೂಪರ್ ಮಾರ್ಕೆಟ್‍ನಲ್ಲಿ ವೈನ್‍ಸ್ಟೋರ್ – ಮಹಾರಾಷ್ಟ್ರ ಸರ್ಕಾರದಿಂದ ಅನುಮತಿ