ಬೆಂಗಳೂರು: ನಗರದಲ್ಲಿ ಮಹಿಳೆಯೊಬ್ಬರ ಮೇಲೆ ಮೂವರು ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿರೋ ಬಗ್ಗೆ ವರದಿಯಾಗಿದೆ.
ಹಲ್ಲೆಗೊಳಗಾದ ಮಹಿಳೆಯನ್ನು ಟಿ. ಮಹಾಲಕ್ಷ್ಮೀ ಎಂದು ಗುರುತಿಸಲಾಗಿದೆ. ಈ ಘಟನೆ ವಿಜಯನಗರ ಬಳಿಯ ಚೋಲೂರುಪಾಳ್ಯದಲ್ಲಿ ನಡೆದಿದೆ.
ಮಹಾಲಕ್ಷ್ಮಿ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಸಂಘದ ಕರ್ನಾಟಕ ದಕ್ಷಿಣ ವಲಯದ ಅಧ್ಯಕ್ಷೆಯಾಗಿದ್ದಾರೆ. ಮಹಾಲಕ್ಷ್ಮೀ ಅವರು ತಮ್ಮ ಕಚೇರಿಯಲ್ಲಿದ್ದ ಸಂದರ್ಭದಲ್ಲಿ ನವೀನ್, ರೋಹಿತ್ ಹಾಗೂ ಮತ್ತೋರ್ವ ಅಪರಿಚಿತ ಏಕಾಏಕಿ ಕಚೇರಿಗೆ ನುಗ್ಗಿದ್ದಾರೆ. ಬಳಿಕ ಮಹಾಲಕ್ಷ್ಮೀ ಅವರ ತಲೆ, ಬೆನ್ನು ಹಾಗೂ ಕೈಗೆ ರಾಡ್ ನಿಂದ ಹಲ್ಲೆ ಮಾಡಿದ್ದಾರೆ.
ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ಹಲ್ಲೆ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗುತ್ತಿದೆ. ಮಹಿಳೆ ಕಾಂಗ್ರೆಸ್ ಜೊತೆ ಗುರ್ತಿಸಿಕೊಂಡಿದ್ದಕ್ಕೆ ಮಾಜಿ ಕಾರ್ಪೋರೇಟರ್ ರವೀಂದ್ರ ಬೆಂಬಲಿಗರು ಹಲ್ಲೆ ನಡೆಸಿರುವ ಬಗ್ಗೆ ಶಂಕಿಸಲಾಗಿದೆ.
ಘಟನೆಯ ಬಳಿಕ ಗಾಯಾಳು ಮಹಾಲಕ್ಷ್ಮೀ ಅವರನ್ನು ನಗರದ ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಕುರಿತು ಕೆಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.