ಮಗಳಿಗೆ ಮದ್ವೆಯಾಗಿದ್ರೂ ಇಬ್ಬರ ಜೊತೆ ತಾಯಿ ಸಂಬಂಧ – ಸಿಕ್ಕಿಬಿದ್ದ ಇಬ್ಬರನ್ನು ಕೊಂದ ಪ್ರಿಯಕರ..!

Public TV
2 Min Read
CNG MURDER

ಚಾಮರಾಜನಗರ: ಅಕ್ರಮ ಸಂಬಂಧಕ್ಕೆ ಮಹಿಳೆ ಹಾಗೂ ಆಕೆಯ ಪ್ರಿಯಕರ ಬಲಿಯಾಗಿರುವ ಘಟನೆ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನಲ್ಲಿ ನಡೆದಿದೆ.

ಮೃತರನ್ನು ಮಹೇಶ್ವರಿ ಹಾಗೂ ಪುಟ್ಟಸ್ವಾಮಿ ಎಂದು ಗುರುತಿಸಲಾಗಿದೆ. ಮೃತ ಯುವಕ ಮಹಿಳೆಯನ್ನು ಕೊಲೆ ಮಾಡಿ ತಾನೂ ನೇಣು ಹಾಕಿಕೊಂಡಿದ್ದಾನೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಆದರೆ ನಿಜವಾಗಿ ಅಲ್ಲಿ ನಡೆದಿರುವುದೇ ಬೇರೆ.

ಏನಿದು ಪ್ರಕರಣ?
ಜಿಲ್ಲೆಯ ಕೊಳ್ಳೇಗಾಲ ತಾಲೋಕಿನ ದೊಡ್ಡಿಂದವಾಡಿ ಗ್ರಾಮದ ಮಹೇಶ್ವರಿ ಹಾಗೂ ಪುಟ್ಟಸ್ವಾಮಿ ನಡುವೆ ಅಕ್ರಮ ಸಂಬಂಧ ಇತ್ತು. ಹಾಗಾಗಿಯೇ ಇವರಿಬ್ಬರ ನಡುವೆ ಜಗಳವಾಗಿ ಪ್ರಿಯಕರ ಪುಟ್ಟಸ್ವಾಮಿ ಮಹಿಳೆಯನ್ನು ಕೊಲೆ ಮಾಡಿ, ನಂತರ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ.

love

35 ವರ್ಷದ ಮಹೇಶ್ವರಿಗೆ ಮೂವರು ಮಕ್ಕಳಿದ್ದಾರೆ. ಪತಿ ಸಿದ್ದಣ್ಣ ಗ್ರಾಮದಲ್ಲೇ ಟೀ ಕ್ಯಾಂಟಿನ್ ನಡೆಸುತ್ತಿದ್ದಾನೆ. ಹಿರಿಯ ಮಗಳಿಗೆ ಮದುವೆಯೂ ಆಗಿದೆ. ಹಾಗಿದ್ದರೂ ಮಹೇಶ್ವರಿ ಕಳೆದ ನಾಲ್ಕೈದು ತಿಂಗಳಿಂದ ಅದೇ ಗ್ರಾಮದ ಪುಟ್ಟಸ್ವಾಮಿ ಎಂಬ ಯುವಕನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ.

ಬುಧವಾರ ರಾತ್ರಿ 8 ಗಂಟೆಗೆ ಮನೆಯಿಂದ ಹೊರ ಹೋದ ನನ್ನ ತಾಯಿ ರಾತ್ರಿ 10 ಗಂಟೆಯಾದರೂ ವಾಪಸ್ ಬಂದಿರಲಿಲ್ಲ. ಅಷ್ಟರಲ್ಲಿ ನನಗೆ ಪ್ರಕಾಶ್ ಎಂಬಾತ ಫೋನ್ ಮಾಡಿ ನಿನ್ನ ತಾಯಿಯನ್ನು ಕೊಲೆ ಮಾಡಿದ್ದೇನೆ. ಆಕೆಯ ಶವ ಸಿಂಗನಲ್ಲೂರು ಬಳಿ ಇದೆ ಎಂದು ಹೇಳಿ ಫೋನ್ ಕಟ್ ಮಾಡಿದ್ದನು. ನಂತರ ಹುಡುಕಾಡಿದಾಗ ನನ್ನ ತಾಯಿಯ ಶವ ಸಿಂಗನಲ್ಲೂರು ಹೊರವಲಯದಲ್ಲಿ ಪತ್ತೆಯಾಗಿದೆ. ಪಕ್ಕದಲ್ಲೇ ಇರುವ ನೀರಿನ ತೊಂಬೆಗೆ ನೇಣು ಬಿಗಿದ ಸ್ಥಿತಿಯಲ್ಲಿ ಪುಟ್ಟಸ್ವಾಮಿ ಶವ ಕಂಡು ಬಂದಿದೆ ಎಂದು ಮಹೇಶ್ವರಿ ಮಗಳು ಕವನ ಹೇಳಿದ್ದಾರೆ.

lovers

ಕೊಲೆಯಾದ ಮಹೇಶ್ವರಿ ಯಳಂದೂರು ತಾಲೂಕಿನ ವೈ.ಕೆ.ಮೋಳೆ ಗ್ರಾಮದ ಪ್ರಕಾಶ್ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಇದಲ್ಲದೆ ಕಳೆದ ಮೂರ್ನಾಲ್ಕು ತಿಂಗಳಿಂದ ಈಕೆ ದೊಡ್ಡಿಂದುವಾಡಿ ಗ್ರಾಮದ ಪುಟ್ಟಸ್ವಾಮಿಯೊಂದಿಗೂ ಅಕ್ರಮ ಸಂಬಂಧ ಹೊಂದಿದ್ದಳು. ಇದನ್ನು ಸಹಿಸಲಾಗದೆ ಮೊದಲನೇ ಪ್ರಿಯಕರ ಪ್ರಕಾಶ್ ಎಂಬಾತ ಇದೀಗ ಇಬ್ಬರನ್ನು ಕೊಲೆ ಮಾಡಿದ್ದಾನೆ. ಮೊದಲಿಗೆ ಪುಟ್ಟಸ್ವಾಮಿಯ ಕುತ್ತಿಗೆಯನ್ನು ಸೀರೆಯಿಂದ ಬಿಗಿದು ಕೊಲೆ ಮಾಡಿ ನೀರಿನ ತೊಂಬೆಗೆ ನೇತುಹಾಕಿದ್ದಾನೆ. ಬಳಿಕ ಮಹೇಶ್ವರಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಆಕೆಯನ್ನೂ ಕೊಲೆ ಮಾಡಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರಕುಮಾರ್ ಮೀನಾ ಹೇಳಿದ್ದಾರೆ.

ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರಕುಮಾರ್ ಮೀನಾ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕೊಲೆಯಾದ ಮಹೇಶ್ವರಿಯ ಮಗಳಿಗೆ ಪೋನ್ ಮಾಡಿದ್ದ ಆರೋಪಿ ಪ್ರಕಾಶ್ ನನ್ನು ಕೊಳ್ಳೇಗಾಲ ಪೊಲೀಸರು ಬಂಧಿಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Share This Article
Leave a Comment

Leave a Reply

Your email address will not be published. Required fields are marked *