ಚಂಡೀಗಢ: ಪ್ರಿಯಕರನ ಜೊತೆ ಸೇರಿ ಮಹಿಳೆಯೊಬ್ಬಳು ತನ್ನ ಪತಿಯ ಕತ್ತು ಹಿಸುಕಿ ಕೊಂದು 25 ಅಡಿ ಆಳದ ಶೌಚಾಲಯದ ಗುಂಡಿಯಲ್ಲಿ ಶವವನ್ನು ಹೂತು ಹಾಕಿರುವ ಘಟನೆ ಪಂಜಾಬ್‍ನ (Punjab) ಸಂಗ್ರೂರ್ (Sangrur) ಜಿಲ್ಲೆಯಲ್ಲಿ ನಡೆದಿದೆ.
ಬಕ್ಷೀವಾಲಾ ನಿವಾಸಿ ಅಮ್ರಿಕ್ ಸಿಂಗ್ ಮೃತ ದುರ್ದೈವಿಯಾಗಿದ್ದು, ಸುಮಾರು ಒಂದು ತಿಂಗಳ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದ್ದು, ಶನಿವಾರ ಮೃತದೇಹವನ್ನು ಶೌಚಾಲಯದ ಗುಂಡಿಯಿಂದ ಹೊರ ತೆಗೆಯಲಾಗಿದೆ. ಇದನ್ನೂ ಓದಿ: ತುಂಗಾತೀರದಲ್ಲಿ ಮಾತ್ರವಲ್ಲ, ಚಾರ್ಮಾಡಿ ತಪ್ಪಲಿನಲ್ಲೂ ನಡೀತಾ ಟ್ರಯಲ್ ಬ್ಲಾಸ್ಟ್?
ಆರೋಪಿಯನ್ನು 35 ವರ್ಷದ ರಜ್ಜಿ ಕೌರ್ ಅಲಿಯಾಸ್ ಜಸ್ವಿರ್ ಕೌರ್ ಎಂದು ಗುರುತಿಸಲಾಗಿದ್ದು, ತನ್ನ 13 ಮತ್ತು 11 ವರ್ಷದ ಇಬ್ಬರು ಗಂಡು ಮಕ್ಕಳೊಂದಿಗೆ ವಾಸಿಸುತ್ತಿದ್ದಳು. ನವೆಂಬರ್ 20 ರಂದು ತನ್ನ ಪತಿ ನಾಪತ್ತೆಯಾಗಿರುವುದಾಗಿ ಪತಿಗೆ ದೂರು ನೀಡಿದ್ದಾಳೆ. ಪ್ರಕರಣ ಸಂಬಂಧ ತನಿಖೆ ವೇಳೆ ಕೌರ್ ಅದೇ ಪ್ರದೇಶದ ನಿವಾಸಿ ಸುರ್ಜಿತ್ ಸಿಂಗ್ ಬಗ್ಗಾ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವಿಚಾರ ಬಯಲಾಗಿದೆ. ಪ್ರಿಯಕರ ಸುರ್ಜಿತ್ ಜೊತೆ ಸೇರಿ ತನ್ನ ಪತಿಯನ್ನು ಅಕ್ಟೋಬರ್ 27ರಂದು ಕೊಂದಿರುವುದಾಗಿ ಮಹಿಳೆ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಸಂಗ್ರೂರ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‍ಎಸ್‍ಪಿ) ಸುರೇಂದ್ರ ಲಂಬಾ ತಿಳಿಸಿದ್ದಾರೆ.
ಅಕ್ಟೋಬರ್ 27ರ ಸಂಜೆ ತನ್ನ ಪತಿ ಅಮ್ರಿಕ್‍ಗೆ ಕೋಳಿ ಸಾಂಬಾರ್‍ನಲ್ಲಿ ನಿದ್ದೆ ಮಾತ್ರೆಗಳನ್ನು ಬೆರೆಸಿ ಊಟ ಮಾಡಿಸಿದ್ದಾಳೆ. ನಂತರ ಅಮ್ರಿಕ್ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ ಬಳಿಕ ಪ್ರಿಯಕರನನ್ನು ಮನೆಗೆ ಕರೆಸಿ ಇಬ್ಬರು ಸೇರಿ ಆತನ ಕತ್ತು ಹಿಸುಕಿ ಕೊಂದಿದ್ದಾರೆ. ಬಳಿಕ 25 ಅಡಿ ಆಳದ ಶೌಚಾಲಯದ ಗುಂಡಿಯಲ್ಲಿ ಶವವನ್ನು ಹೂತು ಹಾಕಿದ್ದಾರೆ. ಕೊನೆಗೆ ಯಾವುದೇ ಅನುಮಾನ ಬರದಂತೆ 20 ದಿನಗಳ ನಂತರ ನಾಪತ್ತೆ ದೂರು ನೀಡಿದ್ದಾಳೆ. ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಲಾಗಿದ್ದು, ಶನಿವಾರ ಶವವನ್ನು ಹೊರತೆಗೆಯಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಬುಲೆಟ್ ಸವಾರಿ – ವೀಡಿಯೋ ವೈರಲ್