ಗುರುಗಾಂವ್: 34 ವರ್ಷದ ಮಹಿಳೆಯೊಬ್ಬರು ಆಟೋ ಚಾಲಕನ ಮೇಲೆ ಗುಂಡಿನ ದಾಳಿ ನಡೆಸಲು ಯತ್ನಿಸಿದ ಘಟನೆ ಬುಧವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸಪ್ನಾ ಹಾಗೂ ಆಕೆಯ ಪತಿ ಭುರೇಯನ್ ಎಂಬಾತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಏನಿದು ಪ್ರಕರಣ?:
ಬುಧವಾರ ಗುರುಗಾಂವ್ ರಸ್ತೆ ಪಕ್ಕದಲ್ಲಿ ವಾಹನ ಪಾರ್ಕಿಂಗ್ ಮಾಡೋ ವಿಚಾರದಲ್ಲಿ ಮಹಿಳೆ ಹಾಗೂ ಆಟೋ ರಿಕ್ಷಾ ಚಾಲಕನಿಗೆ ಮಾತಿನ ಚಕಮಕಿ ನಡೆದಿತ್ತು. ಇದೇ ವೇಳೆ ಮಹಿಳೆಯ ಪತಿ ತನಗೆ ಹೊಡೆದಿದ್ದಾನೆ ಅಂತ ಚಾಲಕ ಆರೋಪಿಸಿದ್ದಾರೆ.
ಭವಾನಿ ಎನ್ಕ್ಲೇವ್ ಎಂಬ ಪ್ರದೇಶದಲ್ಲಿ ಬೆಳಗ್ಗೆ ನಡೆದ ಈ ಘಟನೆಯನ್ನು ಅಲ್ಲೇ ಇದ್ದ ಸ್ಥಳೀಯರು ಗಮನಿಸಿದ್ದಾರೆ. ಅಲ್ಲದೇ ಕೆಲವರು ಇದನ್ನು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ. ಬಳಿಕ ಪೊಲೀಸರಿಗೆ ಈ ದೃಶ್ಯವನ್ನು ನೀಡಿದ್ದಾರೆ.
ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಸಪ್ನಾ ಹಾಗೂ ಆಕೆಯ ಪತಿ ಭುರೇಯನ್ನು ಬಂಧಿಸಿ, ಸೆಕ್ಟರ್ 9 ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ. ಇವರೊಂದಿಗೆ ಹಲ್ಲೆ ನಡೆಸಲು ಇನ್ನೋರ್ವ ವ್ಯಕ್ತಿ ಕೂಡ ಇದ್ದಿದ್ದು, ಆತ ಪೊಲೀಸರು ಬರುತ್ತಿದ್ದಂತೆಯೇ ಪರಾರಿಯಾಗಿದ್ದಾನೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಹಾಗೂ ಆಕೆಯ ಪತಿ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ಹಾಗೆಯೇ ತಲೆಮರೆಸಿಕೊಂಡಿರೋ ಆರೋಪಿಯನ್ನು ಕೂಡ ಶೀಘ್ರವೇ ಬಂಧಿಸುವುದಾಗಿ ಎಸಿಪಿ ರಾಜೀವ್ ಕುಮಾರ್ ತಿಳಿಸಿದ್ದಾರೆ.
ಆಟೋ ರಿಕ್ಷಾ ಚಾಲಕನನ್ನು ಸುನೀಲ್ ಎಂದು ಗುರುತಿಸಲಾಗಿದ್ದು, ಇವರು ರಸ್ತೆ ಪಕ್ಕದಲ್ಲಿ ತನ್ನ ಆಟೋವನ್ನು ಪಾರ್ಕ್ ಮಾಡಿದ್ದರು. ಈ ವೇಳೆ ಅಲ್ಲಿಗೆ ಬಂದ ಸಪ್ನಾ ವಾಹನ ಅಲ್ಲಿಂದ ತೆಗೆಯುವಂತೆ ಸೂಚಿಸಿದ್ದಾರೆ. ಆದ್ರೆ ಸಪ್ನಾ ಮಾತನ್ನು ಸುನೀಲ್ ಕಡೆಗಣಿಸಿದ್ದಾರೆ. ಇದರಿಂದ ಸಿಟ್ಟುಗೊಂಡ ಮಹಿಳೆ ಸುನೀಲ್ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ. ಈ ವೇಳೆ ಸುನೀಲ್ ಪಕ್ಕದಲ್ಲೇ ಆಟೋ ನಿಲ್ಲಿಸಿ ಜಗಳವಾಡಿದ್ದಾನೆ. ಹೀಗಾಗಿ ಇಬ್ಬರು ಕೈಕೈ ಮಿಲಾಯಿಸಿಕೊಂಡಿದ್ದಾರೆ ಅಂತ ಕುಮಾರ್ ತಿಳಿಸಿದ್ದಾರೆ.
ಜಗಳ ತಾರಕಕ್ಕೇರಿ ಸಪ್ನಾ ತನ್ನ ಹಣೆಗೆ ಪಿಸ್ತೂಲ್ ಇಟ್ಟು ಗುಂಡಿನ ದಾಳಿ ನಡೆಸಲು ಮುಂದಾದ್ರು. ಈ ವೇಳೆ ಎಚ್ಚೆತ್ತುಕೊಂಡು ಮಹಿಳೆ ಕೈಯಿಂದ ಪಿಸ್ತೂಲನ್ನು ದೂಡಿ ಆಗುವ ಅನಾಹುತದಿಂದ ಪಾರಾದೆ ಅಂತ ಚಾಲಕ ಸುನೀಲ್ ನಡೆದ ಘಟನೆಯನ್ನು ವಿವರಿಸಿದ್ದಾರೆ.