Connect with us

ರಾಯಚೂರು: ಪಿಎಚ್‍ಡಿ ಗೋಲ್ಮಾಲ್ ಪ್ರಶ್ನಿಸಿದ್ದಕ್ಕೆ ಕೃಷಿ ವಿವಿಯ ಮಹಿಳಾ ಸಿಬ್ಬಂದಿಗೆ ಜೀವ ಬೆದರಿಕೆ

ರಾಯಚೂರು: ಪಿಎಚ್‍ಡಿ ಗೋಲ್ಮಾಲ್ ಪ್ರಶ್ನಿಸಿದ್ದಕ್ಕೆ ಕೃಷಿ ವಿವಿಯ ಮಹಿಳಾ ಸಿಬ್ಬಂದಿಗೆ ಜೀವ ಬೆದರಿಕೆ

ರಾಯಚೂರು: ಪಿಎಚ್‍ಡಿ ಗೋಲ್‍ಮಾಲ್ ಪ್ರಶ್ನಿಸಿದ್ದಕ್ಕೆ ವಿವಿ ಹಿರಿಯ ಅಧಿಕಾರಿಗಳು ಮಹಿಳಾ ಸಿಬ್ಬಂದಿಗೆ ಕೊಲೆಬೆದರಿಕೆ ಹಾಕಿರೋ ಪ್ರಕರಣ ರಾಯಚೂರು ಕೃಷಿ ವಿಶ್ವ ವಿದ್ಯಾಲಯದಲ್ಲಿ ಬೆಳಕಿಗೆ ಬಂದಿದೆ.

ವಿವಿಯ ಕೃಷಿ ವಿಜ್ಞಾನ ಕೇಂದ್ರದ 16 ಎಕರೆ ಕೃಷಿ ಫಾರ್ಮ್‍ನ ವ್ಯವಸ್ಥಾಪಕಿ ಅನಿತಾ ಹಿರಿಯ ಅಧಿಕಾರಿಗಳಿಂದ ಕಿರುಕುಳ ಅನುಭವಿಸುತ್ತಿದ್ದಾಗಿ ಹೇಳಿದ್ದಾರೆ. ವಿವಿ ಜಮೀನಿನಲ್ಲಿ ಏನೇ ಸಂಶೋಧನಾ ಬೆಳೆ ಬೆಳೆದರೂ ಅದರ ಕಟಾವ್‍ನಿಂದ ಮಾರಾಟದವರೆಗೆ ಅನಿತಾರದ್ದೇ ಜವಾಬ್ದಾರಿ. ಆದ್ರೆ ಇಲ್ಲಿ ಅಧ್ಯಾಪಕರಾಗಿರುವ ಮೋಹನ್ ಚೌಹಾಣ್ ತಮ್ಮ ಪಿಎಚ್‍ಡಿ ಪದವಿಗಾಗಿ ನಡೆಸಿರುವ ಸಹಜ ಹತ್ತಿ ಮೇಲಿನ ಸಂಶೋಧನೆಯಲ್ಲಿ ಗೋಲ್‍ಮಾಲ್ ಮಾಡಿರುವುದನ್ನ ಬಹಿರಂಗ ಪಡಿಸಿದ್ದೇ ಕಿರುಕುಳಕ್ಕೆ ಕಾರಣ ಎನ್ನಲಾಗಿದೆ.

ಕೆ.ವಿ.ಕೆ. ಫಾರ್ಮ್‍ನಲ್ಲಿ ಬೆಳೆಯದ 300 ಕೆ.ಜಿ. ಬಿಟಿ ಹತ್ತಿಯನ್ನ ತಂದು ಸ್ಟೋರ್‍ನಲ್ಲಿಟ್ಟು ಸಂಶೋಧನಾ ಬೆಳೆ ಅಂತ ಮೋಹನ್ ಚೌಹಾಣ್ ಮಂಡಿಸಲು ಮುಂದಾಗಿದ್ದು, ಇದಕ್ಕೆ ಅನಿತಾ ವಿರೋಧ ವ್ಯಕ್ತಪಡಿಸಿ ವಿವಿ ಕುಲಪತಿ ಹಾಗೂ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಸಂಶೋಧನಾ ಮಾರ್ಗದರ್ಶಕ ಡಾ.ಸತ್ಯನಾರಾಯಣ್, ವಿಸ್ತರಣಾ ನಿರ್ದೇಶಕ ಎಸ್.ಕೆ.ಮೇಟಿ ನಕಲಿ ಸಂಶೋಧನೆಗೆ ಪಿಎಚ್‍ಡಿ ಕೊಡಿಸಲು ಮುಂದಾಗಿದ್ದು, ಸುಮ್ಮನಿರುವಂತೆ ಅನಿತಾಗೆ ಒತ್ತಡ ಹೇರಿದ್ದಾರೆ ಎನ್ನಲಾಗಿದೆ. ದೂರು ನೀಡಿದ್ದರಿಂದ ಶಿಕ್ಷಣ ನಿರ್ದೇಶಕ ಡಾ.ಬಿ.ವಿ.ಪಾಟೀಲ್, ಕೃಷಿ ವಿಜ್ಞಾನ ಕೇಂದ್ರ ಕಾರ್ಯಕ್ರಮ ಸಂಯೋಜಕ ಡಾ.ಅಮರೇಶ್ ಕೊಲೆಬೆದರಿಕೆ ಹಾಕಿದ್ದಾರೆ ಅಂತ ಅನಿತಾ ಪೊಲೀಸ್ ಠಾಣೆ ಮೆಟ್ಟಿಲೇರಲು ಮುಂದಾಗಿದ್ದಾರೆ.

ಮೋಹನ್ ಚೌಹಾಣ್ ಸಂಶೋಧನೆ ಬಗ್ಗೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದಾಗಿನಿಂದ ಕಚೇರಿಯಲ್ಲಿ ಯಾವುದೇ ಕೆಲಸವನ್ನ ಕೊಡುತ್ತಿಲ್ಲ. ಅಲ್ಲದೆ ಕಚೇರಿಯಲ್ಲಿನ ಸಿಬ್ಬಂದಿಗಳು ಚೌಹಾಣ್ ಪರವಾಗಿದ್ದು ಸಾಮೂಹಿಕ ವರ್ಗಾವಣೆಗೆ ಅರ್ಜಿ ಹಾಕುವ ಮೂಲಕ ನನ್ನ ವಿರುದ್ದ ದೂರು ನೀಡಿದ್ದಾರೆ. ಕೃಷಿ ವಿವಿಯಲ್ಲಿನ ಅವ್ಯವಸ್ಥೆ ಹಾಗೂ ಭ್ರಷ್ಟಾಚಾರದ ಬಗ್ಗೆ ಧ್ವನಿ ಎತ್ತಿದ್ದಕ್ಕೆ ನನಗೇ ಶಿಕ್ಷೆ ನೀಡುತ್ತಿದ್ದಾರೆ ಅನ್ನೋದು ಅನಿತಾ ಅಳಲು. ಅನಿತಾ ದೂರಿನ ಮೇರೆಗೆ ವಿವಿ ಕುಲಪತಿ ಡಾ.ಪಿ.ಎಂ.ಸಾಲಿಮಠ್ ಈಗಾಗಲೇ ಸತ್ಯ ಶೋಧನಾ ಸಮಿತಿ ರಚಿಸಿದ್ದು ವರದಿ ಬರುವುದು ಬಾಕಿಯಿದೆ.

ಇತ್ತೀಚಿಗಷ್ಟೇ ಇಲ್ಲಿನ ಕೆಲ ಪ್ರೋಫೆಸರ್‍ಗಳು ನಕಲಿ ದಾಖಲೆಗಳಿಂದ ಕಲಂ 371 ಜೆ ಪ್ರಮಾಣಪತ್ರ ಪಡೆದು ಸುದ್ದಿಯಾಗಿದ್ರು.

 

Advertisement
Advertisement