ಅಹಮದಾಬಾದ್: ಪ್ರಜ್ಞೆ ಕಳೆದುಕೊಂಡಿದ್ದ ಸಂದರ್ಭದಲ್ಲಿ ತನ್ನ ಪತಿ ತಲಾಖ್ ನೀಡಿದ್ದಾರೆಂದು ಆರೋಪಿಸಿ 23 ವರ್ಷದ ಮಹಿಳೆಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
3 ವರ್ಷದ ಮಗುವಿನ ತಾಯಿಯಾದ ರುಬಿನಾ ಅಫ್ಜಲ್ ಲಖಾನಿ ತನ್ನ ಪತಿ ಅಫ್ಜಲ್ ಹುಸೈನ್ ವಿರುದ್ಧ ರಾಜ್ಕೋಟ್‍ನಲ್ಲಿ ಗುರುವಾರದಂದು ಎಫ್‍ಐಆರ್ ದಾಖಲಿಸಿದ್ದಾರೆ. 18 ತಿಂಗಳ ಹಿಂದೆ ರುಬಿನಾಗೆ ಪ್ರಜ್ಞೆ ಹೋಗಿದ್ದ ವೇಳೆ ತನ್ನ ಪತಿ ತ್ರಿವಳಿ ತಲಾಖ್ ನೀಡಿದ್ದು, ಮನೆಯಿಂದ ಹೊರಹಾಕಿದ್ದಾಗಿ ಆರೋಪ ಮಾಡಿದ್ದಾರೆ.
Advertisement
5 ವರ್ಷಗಳ ಹಿಂದೆ ರುಬಿನಾ (23) ಅಫ್ಜಲ್ ನನ್ನು ವಿವಾಹವಾಗಿದ್ದರು. ತನ್ನ ಅತ್ತೆ ಮನೆಯವರು ಹಾಗೂ ಗಂಡನಿಂದ ಶೋಷಣೆಗೊಳಗಾಗಿದ್ದಾಗಿ ದೂರಿದ್ದಾರೆ. 18 ತಿಂಗಳ ಹಿಂದೆ ಮನೆಕೆಲಸದ ವಿಚಾರಕ್ಕೆ ಸಂಬಂಧಿಸಿದಂತೆ ಅಫ್ಜಲ್ ರುಬಿನಾಗೆ ಥಳಿಸಿದ್ದು, ಈ ವೇಳೆ ಆಕೆ ಪ್ರಜ್ಞೆ ಕಳೆದುಕೊಂಡಿದ್ದರು. ಈ ಸಂದರ್ಭದಲ್ಲಿ ರುಬಿನಾ ಪತಿ ತ್ರಿವಳಿ ತಲಾಖ್ ನೀಡಿದ್ದಾನೆ. ಆಕೆಗೆ ಪ್ರಜ್ಞೆ ಬಂದ ನಂತರ, ತನ್ನ ಅತ್ತೆ ತಲಾಖ್ ಬಗ್ಗೆ ತಿಳಿಸಿದ್ದಾಗಿ ರುಬಿನಾ ಹೇಳಿದ್ದಾರೆ.
Advertisement
ಅಫ್ಜಲ್ ನನಗೆ ಮೂರು ಬಾರಿ ತಲಾಖ್ ಹೇಳಿದ್ದು ವಿಚ್ಛೇದನ ಆಗಿದೆ ಅಂತ ಅತ್ತೆ ಹೇಳಿದ್ರು. ಹೀಗಾಗಿ ನಾನು ಮನೆಯಿಂದ ಹೊರಗೆ ಹೋಗಬೇಕೆಂದು ಎಂದು ಹೇಳಿದ್ರು. ನನಗೆ ಪ್ರಜ್ಞೆ ಇರಲಿಲ್ಲ. ಹಾಗೂ ಆ ರೀತಿ ಏನೂ ನನಗೆ ಕೇಳಿಸಲಿಲ್ಲ ಎಂದು ವಾದ ಮಾಡಿದೆ. ಆದ್ರೆ ಅವರು ಯಾವುದನ್ನೂ ಕೇಳಿಸಿಕೊಳ್ಳಲೇ ಇಲ್ಲ. ಮನೆಯಿಂದ ಹೊರಹೋಗಲು ಹೇಳಿದ್ರು ಎಂದು ರುಬಿನಾ ತಿಳಿಸಿದ್ದಾರೆ.
Advertisement
ಮನೆಯಿಂದ ಹೊರಬಂದ ರುಬಿನಾ ಅಂದಿನಿಂದ ಮೊಬಿ ಬಜಾರ್‍ನಲ್ಲಿಯ ತನ್ನ ತಂದೆಯ ಮನೆಯಲ್ಲಿ ವಾಸವಾಗಿದ್ದರು. ಕುಟುಂಬದ ಸದಸ್ಯರು ಮತ್ತು ಸಮುದಾಯದ ಮುಖಂಡರು ಪತಿ ಪತ್ನಿಯರ ನಡುವಿನ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಿದರಾದ್ರೂ ಯಾವುದೇ ಪ್ರಯೋಜನವಾಗಿರಲಿಲ್ಲ.
Advertisement
ಇದೀಗ ಅಫ್ಜಲ್ ಸೇರಿದಂತೆ ಅವನ ತಾಯಿ ರಶೀದಾ, ತಂದೆ ಹುಸೇನ್ ಜಮಾಲ್, ಸಹೋದರಿ ಸುಹಾನಾ ಅಕ್ರಮ್ ಖೊರಾನಿ ಹಾಗೂ ರಿಶೀದಾ ತಂದೆ ಕರೀಮ್ ಒಸ್ಮಾನ್ ವಿರುದ್ಧ ಐಪಿಸಿ ಸೆಕ್ಷನ್‍ನಡಿ ಮಾನಸಿಕ ಮತ್ತು ದೈಹಿಕ ಕಿರುಕುಳದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.
ಅವರಿಗೆ ಕೌಟುಂಬಿಕ ಸಮಸ್ಯೆಗಳಿದ್ದು, ಅದರಿಂದ ಆಗಾಗ ದೈಹಿಕ ಹಲ್ಲೆಯೂ ನಡೆದಿದೆ. ಮಹಿಳೆಯ ದೂರಿನನ್ವಯ ಪ್ರಕರಣ ದಾಖಲಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.