ಲಕ್ನೋ: ಯುವಕನೊಬ್ಬ ತನ್ನ ಪ್ರೇಯಸಿಯೊಂದಿಗೆ ಓಡಿಹೋಗಿದ್ದಕ್ಕೆ ಆತನ ಕುಟುಂಬವನ್ನ ಅಪಹರಿಸಿದ್ದಲ್ಲದೆ ತಾಯಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಆಘಾತಕಾರಿ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಯುವತಿಯ ಕಡೆಯವರು ಮಹಿಳೆಯನ್ನ ಅಪಹರಣ ಮಾಡಿ ಗ್ಯಾಂಗ್ರೇಪ್ ನಡೆಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಸಂತ್ರಸ್ತ ಮಹಿಳೆ ಭೋಪುರಾ ಗ್ರಾಮದ ನಿವಾಸಿ ಎಂದು ಎಸ್ಪಿ ಅಜಯ್ ಪಾಲ್ ಶರ್ಮಾ ಹೇಳಿದ್ದಾರೆ. ಸಂತ್ರಸ್ತೆ ಹಾಗೂ ಆಕೆಯ ಕುಟುಂಬವನ್ನ ಅಪಹರಿಸಿ ಸಮೀಪದ ನೋಜಲ್ ಗ್ರಾಮಕ್ಕೆ ಕರೆದೊಯ್ದಿದ್ದು, ಅಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿದೆ. ಆರೋಪಿಗಳ ವಿರುದ್ಧ ಪೊಕಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಂತ್ರಸ್ತೆಯ 26 ವರ್ಷದ ಮಗ ಘಜಿಯಾಬಾದ್ನಲ್ಲಿ ಓದುತ್ತಿದ್ದು, ತನ್ನ ಕ್ಲಾಸ್ಮೇಟ್ ಆಗಿದ್ದ 24 ವರ್ಷದ ಯುವತಿ ಜೊತೆ ಪ್ರೇಮಾಂಕುರವಾಗಿತ್ತು. ಯುವಕ ಯುವತಿ ಇಬ್ಬರೂ ನವೆಂಬರ್ 20ರಂದು ಓಡಿಹೋಗಿದ್ದರು.
ಇದಾದ ಬಳಿಕ ಡಿಸೆಂಬರ್ 19ರಂದು ಯುವತಿಯ ಮನೆಯವರು ಶಾಮ್ಲಿ ಜಿಲ್ಲೆಗೆ ಬಂದು ಯುವಕನ ತಾಯಿ, ತಂದೆ, ಅಣ್ಣ ಹಾಗೂ ಮತ್ತೊಬ್ಬ ಸಹೋದರ ಸಂಬಂಧಿಯನ್ನು ಅಪಹರಿಸಿದದ್ದಾರೆ. ಒಂದು ವಾರದ ವರೆಗೆ ಕುಟುಂಬಸ್ಥರನ್ನ ವಶದಲ್ಲಿರಿಸಿಕೊಂಡು ಕಿರುಕುಳ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಯುವತಿಯ ಕುಟುಂಬಸ್ಥರ ವಿರುದ್ಧ ಅಪಹರಣ ಹಾಗೂ ಸಾಮೂಹಿಕ ಅತ್ಯಾಚಾರದ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಅಪಹರಣದ ಬಗ್ಗೆ ಡಿಸೆಂಬರ್ 25ರಂದು ಖಚಿತ ಮಾಹಿತಿ ಸಿಕ್ಕ ನಂತರ ಅವರನ್ನ ರಕ್ಷಣೆ ಮಾಡಿದೆವು. ನಂತರ ಸಂತ್ರಸ್ತೆ ನಡೆದ ಘಟನೆಯನ್ನ ವಿವರಿಸಿದ್ರು. ಯುವತಿಯ ತಂದೆ ಹಾಗೂ ಆಕೆಯ ಇಬ್ಬರು ಚಿಕ್ಕಪ್ಪಂದಿರ ವಿರುದ್ಧ ಸಾಮೂಹಿಕ ಅತ್ಯಾಚಾರದ ಪ್ರಕರಣ ದಾಖಲಿಸಿದ್ದೇವೆ. ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಉಳಿದವರು ತಲೆಮರೆಸಿಕೊಂಡಿದ್ದಾರೆ ಎಂದು ಶರ್ಮಾ ತಿಳಿಸಿದ್ದಾರೆ.