ಬೆಳಗಾವಿ: ವಿಜಯಪುರದ ದಾನಮ್ಮ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣ ಮಾಸುವ ಮುನ್ನ ರಾಜ್ಯದಲ್ಲಿ ಮತ್ತೊಂದು ನಿರ್ಭಯ ಪ್ರಕರಣ ನಡೆದಿದೆ. ಭಾನುವಾರ ತಡರಾತ್ರಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಘೋಡಗೇರಿ ಗ್ರಾಮದಲ್ಲಿ ಬಹಿರ್ದೆಸೆಗೆ ತೆರಳಿದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ವಿಚಾರ ತಿಳಿದ ತಕ್ಷಣ ಯಮಕನಮರಡಿ ಪೊಲೀಸರು ಕಾರ್ಯಾಚರಣೆ ನಡೆಸಿ ಅತ್ಯಾಚಾರಿ ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳನ್ನು 29 ವರ್ಷದ ನವೀನ ಕುಮಾರ ಕಾಂಬಳೆ ಹಾಗೂ 30 ವರ್ಷದ ಶಿವಾನಂದ ಯರಗಟ್ಟಿ ಎಂದು ಗುರುತಿಸಲಾಗಿದೆ. 35 ವರ್ಷದ ಸಂತ್ರಸ್ತ ಮಹಿಳೆ ರಾತ್ರಿ ಬಹಿರ್ದೆಸೆಗೆಂದು ಮನೆಯಿಂದ ತೆರಳಿದ್ದಾರೆ. ಈ ಸಂದರ್ಭದಲ್ಲಿ ಅದೇ ಗ್ರಾಮದ ಕುಮಾರ ಕಾಂಬಳೆ ಮತ್ತು ಶಿವಾನಂದ ಯರಗಟ್ಟಿ ಹಿಂಬಾಲಿಸಿಕೊಂಡು ಸಂತ್ರಸ್ತೆಯನ್ನು ಹೊತ್ತೊಯ್ದು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ.
ಸಂತ್ರಸ್ತೆ ನಂತರ ಮನೆಗೆ ಬಂದು ನಡೆದ ವಿಷಯವನ್ನು ತಿಳಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯಕ್ಕೆ ಸಂತ್ರಸ್ತೆಯನ್ನು ವೈದ್ಯಕೀಯ ತಪಾಸಣೆಗಾಗಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ವೈದ್ಯಕೀಯ ತಪಾಸಣೆಗೆ ಹುಕ್ಕೇರಿ ಸರಕಾರಿ ಆಸ್ಪತ್ರೆಗೆ ಪೊಲೀಸರು ಕರೆದುಕೊಂಡು ಹೋಗಿದ್ದಾರೆ.