ಲಕ್ನೋ: ನಗರದ ಖೈಸರ್‍ಬಾಗ್ ಪ್ರದೇಶದಲ್ಲಿ 82 ವರ್ಷದ ವೃದ್ಧೆಯೊಬ್ಬಳನ್ನು ಸಾಕುನಾಯಿಯೇ ಕಚ್ಚಿ ಕೊಂದಿದೆ.
ಮಂಗಳವಾರ ಬೆಳಗ್ಗೆ ಸುಶೀಲಾ ತ್ರಿಪಾಠಿ(82) ಅವರು ತಮ್ಮ ಮನೆಯ ಟೆರೆಸ್ ಮೇಲೆ ಇದ್ದರು. ಈ ವೇಳೆ ಅಲ್ಲೇ ಇದ್ದ ಪಿಟ್ ಬುಲ್ ತಳಿಯ ನಾಯಿ ಆಕೆ ಮೇಲೆ ದಾಳಿ ಮಾಡಲು ಪ್ರಾರಂಭ ಮಾಡಿದೆ. ಈ ವೇಳೆ ಮನೆಯಲ್ಲಿ ಯಾರು ಇಲ್ಲದ ಕಾರಣ ಸುಶೀಲಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ನಡೆದಿದ್ದೇನು?
ಖೈಸರ್‍ಬಾಗ್‍ನ ಸಹಾಯಕ ಪೊಲೀಸ್ ಕಮಿಷನರ್ ಯೋಗೇಶ್ ಕುಮಾರ್ ಅವರು ಈ ಕುರಿತು ಮಾತನಾಡಿದ್ದು, ನಿವೃತ್ತ ಶಾಲಾ ಶಿಕ್ಷಕಿ ಸುಶೀಲಾ ತ್ರಿಪಾಠಿ(82) ತನ್ನ ಕಿರಿಯ ಮಗನೊಂದಿಗೆ ವಾಸಿಸುತ್ತಿದ್ದರು. ಅವರ ಮೇಲೆ ದಾಳಿ ಮಾಡಿದ ಪಿಟ್ ಬುಲ್ ಸೇರಿದಂತೆ ಇವರ ಮನೆಯಲ್ಲಿ ಎರಡು ಸಾಕು ನಾಯಿಗಳಿದ್ದವು. ಸುಶೀಲಾ ಅವರು ಮಂಗಳವಾರ ಬೆಳಗ್ಗೆ ತನ್ನ ಮನೆಯ ಟೆರೆಸ್ ಮೇಲೆ ಇದ್ದಾಗ ಪಿಟ್ ಬುಲ್ ಅವರ ಮೇಲೆ ದಾಳಿ ಮಾಡಿದೆ. ಈ ವೇಳೆ ಅವರ ಮನೆಯಲ್ಲಿ ಯಾರು ಇಲ್ಲದ ಕಾರಣ ಅಲ್ಲೇ ಬಿದ್ದಿದ್ದಾರೆ. ಮನೆಗೆ ಬಂದ ಕೆಲಸದವರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಸುಶೀಲಾ ಅವರನ್ನು ನೋಡಿ ಅವರ ಮಗನಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಸಾವಿನಲ್ಲೂ ಒಂದಾದ ವೃದ್ಧ ದಂಪತಿ – ಪತಿ ಸಾವಿನ ಸುದ್ದಿ ಕೇಳಿ ಪತ್ನಿ ಸಾವು
ನಂತರ ಸುಶೀಲಾ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ವೈದ್ಯರು ಅವರು ಸ್ಥಳದಲ್ಲೇ ಸಾವನ್ನಪ್ಪಿರುವುದನ್ನು ಖಚಿತ ಪಡಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ವಿವರಿಸಿದ್ದಾರೆ.
ಎಲ್‍ಎಂಸಿಯ ಪಶುವೈದ್ಯಾಧಿಕಾರಿ ಡಾ.ಅಭಿನವ್ ವರ್ಮಾ ಅವರು ಈ ಕುರಿತು ಮಾತನಾಡಿದ್ದು, ನಮ್ಮ ತಂಡವು ಪಿಟ್ ಬುಲ್ ನಾಯಿಯನ್ನು ಸಾಕುಪ್ರಾಣಿಯಾಗಿ ಸಾಕಲು ಕುಟುಂಬಕ್ಕೆ ಪರವಾನಗಿ ಇದೆಯೇ ಎಂದು ಪರಿಶೀಲಿಸಲು ಮನೆಗೆ ಹೋಗಿದೆ. ಆದರೆ ಮನೆಗೆ ಬೀಗ ಹಾಕಿದ್ದರಿಂದ ಖಚಿತಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.
ನಾಯಿ ಎಲ್ಲಿದೆ ಎಂಬ ಬಗ್ಗೆ ನಮಗೆ ಮಾಹಿತಿ ಇಲ್ಲ. ನಾಯಿ ಕುರಿತು ವಿಚಾರಣೆ ಮಾಡಲು ನಾವು ಅವರ ಮಗನನ್ನು ಸಂಪರ್ಕ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.