2023ರಲ್ಲಿ ಏಷ್ಯಾ ಖಂಡದಲ್ಲಿ ಸಂಭವಿಸಿದ ಪ್ರವಾಹಗಳು ಮತ್ತು ಚಂಡಮಾರುತಗಳು ಹೆಚ್ಚಿನ ಸಂಖ್ಯೆಯ ಸಾವು ನೋವುಗಳು ಮತ್ತು ಆರ್ಥಿಕ ನಷ್ಟಗಳಿಗೆ ಕಾರಣವಾಗಿದೆ. ಇದರೊಂದಿಗೆ ಉಷ್ಣದ ಅಲೆಗಳ ಪರಿಣಾಮ ತೀವ್ರಗೊಂಡಿದೆ ಎಂದು ವಿಶ್ವ ಹವಾಮಾನ ಸಂಸ್ಥೆಯ (WMO report) 2023ರ ಏಷ್ಯಾದ ವರದಿ ತಿಳಿಸಿದೆ.
ವರದಿಯ ಪ್ರಕಾರ, ಹವಾಮಾನ ವೈಪರಿತ್ಯದಿಂದ (Climate Change) ವಾಯುವ್ಯ ಪೆಸಿಫಿಕ್ ಮಹಾಸಾಗರದಲ್ಲಿ ಸಮುದ್ರ-ಮೇಲ್ಮೈ ತಾಪಮಾನ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ. ಆರ್ಕಿಟಿಕ್ ಮಹಾಸಾಗರವು ಸಹ ಸಮುದ್ರದ ಮೇಲ್ಮೈ ಶಾಖದ ಅಲೆಯನ್ನು ಅನುಭವಿಸಿದೆ. ಈ ಪ್ರದೇಶದ ಅನೇಕ ದೇಶಗಳು ಬರ ಮತ್ತು ಶಾಖದ ಅಲೆಗಳು, ಪ್ರವಾಹ (Floods) ಮತ್ತು ಬಿರುಗಾಳಿಯ ಹೊಡೆತದಿಂದ ತತ್ತರಿಸಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
Advertisement
Advertisement
ಹವಾಮಾನ ಸಂಬಂಧಿ ಅವಘಡಗಳ ಅಂಕಿ ಅಂಶಗಳ ಪ್ರಕಾರ, 2023ರಲ್ಲಿ ಜಲ ಹಾಗೂ ಹವಾಮಾನ ಅಪಾಯಗಳಿಗೆ ಸಂಬಂಧಿಸಿದ 79 ವಿಪತ್ತುಗಳು ಏಷ್ಯಾವನ್ನು ಕಾಡಿವೆ. ಪ್ರವಾಹ ಮತ್ತು ಬಿರುಗಾಳಿಗಳು ಪ್ರಕೃತಿ ವಿಕೋಪದ 80% ಕ್ಕಿಂತ ಹೆಚ್ಚಿನ ಅವಘಡಗಳಿಗೆ ಕಾರಣವಾಗಿದೆ. 2,000 ಕ್ಕೂ ಹೆಚ್ಚು ಸಾವುನೋವುಗಳು ಸಂಭವಿಸಿವೆ ಮತ್ತು ಒಂಬತ್ತು ದಶಲಕ್ಷ ಜನರ ಮೇಲೆ ಇದು ಪರಿಣಾಮ ಬೀರಿದೆ. ಭಾರತದಲ್ಲಿ 2023ರ ಏಪ್ರಿಲ್‌ನಿಂದ ಜೂನ್‌ನಲ್ಲಿ ತೀವ್ರವಾದ ಶಾಖದ ಅಲೆಗಳು ಸುಮಾರು 110 ಜನರ ಸಾವಿಗೆ ಕಾರಣವಾಗಿದೆ.
Advertisement
ಜಾಗತಿಕವಾಗಿ ಏನಾಗುತ್ತಿದೆ?: 2015 ಮತ್ತು 2023ರ ನಡುವೆ ದಾಖಲಾದ ತಾಪಮಾನ ಗಮನಿಸಿದರೆ 2023ರಲ್ಲಿ ಹೆಚ್ಚಿನ ಉಷ್ಣಾಂಶ ದಾಖಲಾಗಿದೆ. ಇದರೊಂದಿಗೆ ಮೂರು ಪ್ರಮುಖ ಹಸಿರುಮನೆ ಅನಿಲಗಳಾದ ಕಾರ್ಬನ್ ಡೈಆಕ್ಸೈಡ್, ಮೀಥೇನ್ ಮತ್ತು ನೈಟ್ರಸ್ ಆಕ್ಸೈಡ್ ವಾತಾವರಣದ ಸಾಂದ್ರತೆ ಹೆಚ್ಚಾಗಿದೆ. ಇದು 2022ರಲ್ಲಿ ಗರಿಷ್ಠ ಮಟ್ಟ ತಲುಪಿತ್ತು.
Advertisement
1960 ಮತ್ತು 2021ರ ನಡುವೆ ವಾತಾವರಣಕ್ಕೆ ಹೊರಸೂಸಲ್ಪಟ್ಟ ವಾರ್ಷಿಕ ಮಾನವ ನಿರ್ಮಿತ ಇಂಗಾಲದ ಡೈಆಕ್ಸೈಡ್‌ನ ಸುಮಾರು 25% ರಷ್ಟು ಸಾಗರಗಳು ಹೀರಿಕೊಂಡಿದ್ದು, ಸಮುದ್ರದ ಮೇಲಿನ ತಾಪಮಾನದ ಹೆಚ್ಚಳಕ್ಕೆ ಕಾರಣವಾಗಿದೆ.
ಭಾರತ ಸ್ಥಿತಿ ಹೇಗಿದೆ?: 2023ರ ಏಪ್ರಿಲ್‌ನಿಂದ ಜೂನ್ ವರೆಗೂ ಭಾರತದಲ್ಲಿ ಬಿಸಿಗಾಳಿಯ ಪರಿಣಾಮ ಸುಮಾರು 110 ಸಾವು ಸಂಭವಿಸಿದೆ. ಆಗಸ್ಟ್ 2023ರಲ್ಲಿ, ಭಾರತವು ದಾಖಲೆಯ-ಹೆಚ್ಚಿನ ಮಾಸಿಕ ಸರಾಸರಿ ತಾಪಮಾನ ಮತ್ತು ಅಸಾಧಾರಣ ಮಳೆಯ ಕೊರತೆಯನ್ನು ಅನುಭವಿಸಿತ್ತು.
ಉತ್ತರ ಹಿಂದೂ ಮಹಾಸಾಗರದ ಮೇಲಿನ ಉಷ್ಣವಲಯದ ಚಂಡಮಾರುತದ ಚಟುವಟಿಕೆಯು ಸರಾಸರಿಗಿಂತ ಸ್ವಲ್ಪ ಹೆಚ್ಚಾಗಿದೆ. ಇದರ ಪರಿಣಾಮವಾಗಿ ಮೈಚಾಂಗ್ ಚಂಡಮಾರುತವು ಡಿಸೆಂಬರ್ 5 ರಂದು ಆಂಧ್ರಪ್ರದೇಶಕ್ಕೆ ಅಪ್ಪಳಿಸಿತ್ತು. ಈ ವೇಳೆ 20ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.
ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡವು ಆಗಸ್ಟ್ 2023ರಲ್ಲಿ ಪ್ರವಾಹ ಮತ್ತು ಭೂಕುಸಿತದಿಂದ ತತ್ತರಿಸಿತ್ತು. ಇದರಿಂದ ಸುಮಾರು 25 ಜನ ಸಾವನ್ನಪ್ಪಿ, ಮನೆ, ಆಸ್ತಿ ಹಾಗೂ ರಸ್ತೆಗಳು ಹಾನಿ ಸಂಭವಿಸಿತ್ತು.
ಅಕ್ಟೋಬರ್‌ನಲ್ಲಿ ಸಿಕ್ಕಿಂನಲ್ಲಿ ಗ್ಲೇಶಿಯಲ್ ಸರೋವರದಿಂದ ಉಂಟಾದ ಪ್ರವಾಹದಿಂದ ತೀಸ್ತಾ ಜಲವಿದ್ಯುತ್ ಅಣೆಕಟ್ಟಿನ ಕುಸಿತಕ್ಕೆ ಕಾರಣವಾಯಿತು, ಇದರ ಪರಿಣಾಮವಾಗಿ 100 ಕ್ಕೂ ಹೆಚ್ಚು ಸಾವುಗಳು ಸಂಭವಿಸಿದವು ಮತ್ತು ಸಾವಿರಾರು ಜನರು ಇದರಿಂದ ತೊಂದರೆಗೊಳಗಾಗಿದ್ದರು.
ಮಳೆ: 2023 ರಲ್ಲಿ ಭಾರತದ ಬೇಸಿಗೆ ಮಾನ್ಸೂನ್ ಸರಾಸರಿಗಿಂತ ಕಡಿಮೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ. ತುರಾನ್ ಲೋಲ್ಯಾಂಡ್ (ತುರ್ಕಮೆನಿಸ್ತಾನ್, ಉಜ್ಬೇಕಿಸ್ತಾನ್, ಕಝಾಕಿಸ್ತಾನ್), ಹಿಂದೂ ಕುಶ್ (ಅಫ್ಘಾನಿಸ್ತಾನ್, ಪಾಕಿಸ್ತಾನ ), ಹಿಮಾಲಯಗಳು, ಗಂಗಾ ಮತ್ತು ಬ್ರಹ್ಮಪುತ್ರ ನದಿಗಳ ಕೆಳಭಾಗದ ಪ್ರದೇಶ (ಭಾರತ ಮತ್ತು ಬಾಂಗ್ಲಾದೇಶ), ಅರಕನ್ ಪರ್ವತಗಳು ಸೇರಿದಂತೆ ಏಷ್ಯಾದ ಇತರ ಹಲವು ಭಾಗಗಳು ( ಮ್ಯಾನ್ಮಾರ್), ಮತ್ತು ಮೆಕಾಂಗ್ ನದಿಯ ಕೆಳಭಾಗದಲ್ಲಿ 2023 ರಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಿದೆ. ಇದರಿಂದ ನೈಋತ್ಯ ಚೀನಾ ಬರಗಾಲವನ್ನು ಅನುಭವಿಸಿತು.
ಹಿಮನದಿಗಳು: 2023 ರಲ್ಲಿ ಹಿಮನದಿಗಳು, ಪೂರ್ವ ಹಿಮಾಲಯ ಮತ್ತು ಮಧ್ಯ ಏಷ್ಯಾದ ಟಿಯಾನ್ ಶಾನ್ ಪರ್ವತಗಳಲ್ಲಿನ ಹೆಚ್ಚಿನ ತಾಪಮಾನದಿಂದ ಅಪಾಯದಲ್ಲಿವೆ.
ಸಮುದ್ರದ ಮೇಲ್ಮೈ ತಾಪಮಾನ ಹೆಚ್ಚಳ: ಅರೇಬಿಯನ್ ಸಮುದ್ರ, ಉತ್ತರ ಪೆಸಿಫಿಕ್ ಮಹಾಸಾಗರದ ಜಲಾನಯನ ಪ್ರದೇಶದ ಪಶ್ಚಿಮ ಭಾಗ, ದಕ್ಷಿಣ ಬ್ಯಾರೆಂಟ್ಸ್ ಸಮುದ್ರ, ದಕ್ಷಿಣ ಕಾರಾ ಸಮುದ್ರ ಮತ್ತು ಆಗ್ನೇಯ ಲ್ಯಾಪ್ಟೆವ್ ಸಮುದ್ರವು ಜಾಗತಿಕವಾಗಿ ಸರಾಸರಿ ಸಮುದ್ರದ ಮೇಲ್ಮೈ ತಾಪಮಾನಕ್ಕಿಂತ ಮೂರು ಪಟ್ಟು ಹೆಚ್ಚು ವೇಗವಾಗಿ ಉಷ್ಣಾಂಶ ಹೆಚ್ಚಾಗುತ್ತಿದೆ.
ನೈಸರ್ಗಿಕ ವಿಕೋಪಗಳು: ಜೂನ್ ಮತ್ತು ಜುಲೈನಲ್ಲಿ, ಪ್ರವಾಹ, ಭೂಕುಸಿತ ಮತ್ತು ಸಿಡಿಲಿನಿಂದ ಭಾರತ, ಪಾಕಿಸ್ತಾನ ಮತ್ತು ನೇಪಾಳದಾದ್ಯಂತ ಸುಮಾರು 600 ಸಾವುಗಳು ಸಂಭವಿಸಿವೆ.
ಹಾಂಗ್ ಕಾಂಗ್ ಅಬ್ಸರ್ವೇಟರಿ ಹೆಡ್‌ಕ್ವಾರ್ಟರ್ಸ್ ಸೆಪ್ಟೆಂಬರ್ 7 ರಂದು ಗಂಟೆಗೆ 158.1 ಮಿಮೀ ಮಳೆಯನ್ನು ದಾಖಲಿಸಿದೆ. ಇದು 1884ರ ನಂತರದ ಗರಿಷ್ಠ ಮಳೆಯಾಗಿದೆ. ವಿಯೆಟ್ನಾಂ ಕೂಡ ಅಕ್ಟೋಬರ್‌ನಲ್ಲಿ ದಾಖಲೆ ಪ್ರಮಾಣದ ದೈನಂದಿನ ಮಳೆಯಾಗಿತ್ತು. ಇಷ್ಟೇ ಅಲ್ಲದೇ ಯೆಮೆನ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಪ್ರವಾಹವನ್ನು ಎದುರಿಸಿದ್ದವು.
ವಿಶ್ವ ಹವಾಮಾನ ಸಂಸ್ಥೆಯ ಕೆಲಸ ಏನು?: WMOನ ಕೇಂದ್ರ ಕಛೇರಿಯು ಸ್ವಿಟ್ಜರ್ಲೆಂಡ್‌ನ ಜಿನೀವಾದಲ್ಲಿದೆ. ಇದು ಭಾರತ ಸೇರಿದಂತೆ 192 ಸದಸ್ಯ ರಾಷ್ಟ್ರಗಳು ಮತ್ತು ಪ್ರಾಂತ್ಯಗಳ ಸದಸ್ಯತ್ವವನ್ನು ಹೊಂದಿದೆ. 23 ಮಾರ್ಚ್ 1950 ರಂದು ಈ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಈ ದಿನಾಂಕವನ್ನು ವಿಶ್ವ ಹವಾಮಾನ ದಿನವಾಗಿ ಆಚರಿಸಲಾಗುತ್ತದೆ. ಇದು ಜನರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ರಾಷ್ಟ್ರೀಯ ಹವಾಮಾನ ಮತ್ತು ಜಲವಿಜ್ಞಾನ ಸೇವೆಗಳ ಪ್ರಮುಖ ಪಾತ್ರವನ್ನು ಎತ್ತಿ ತೋರಿಸುತ್ತದೆ. ಜಾಗತಿಕ ಚಟುವಟಿಕೆಗಳೊಂದಿಗೆ ಗುರುತಿಸಲ್ಪಟ್ಟಿದೆ.
ಹವಾಮಾನ ಬದಲಾವಣೆ ತಗ್ಗಿಸುವಿಕೆಗೆ ಭಾರತದ ಕ್ರಮಗಳೇನು?
* 2030ರ ವೇಳೆಗೆ ಪಳೆಯುಳಿಕೆ ರಹಿತ ಶಕ್ತಿಯ ಸಾಮರ್ಥ್ಯದ 500 GWನ್ನು ತಲುಪುವುದು.
* 2030ರ ವೇಳೆಗೆ 50% ನವೀಕರಿಸಬಹುದಾದ ಶಕ್ತಿಯ ಬಳಕೆ.
* 2030 ರವರೆಗೆ ಒಟ್ಟು ಯೋಜಿತ ಇಂಗಾಲದ ಹೊರಸೂಸುವಿಕೆಯನ್ನು 100 ಕೋಟಿ ಟನ್‌ಗಳಷ್ಟು ಕಡಿತಗೊಳಿಸುವುದು.
* 2005ರ ಮಟ್ಟಕ್ಕಿಂತ 2030ರ ಹೊತ್ತಿಗೆ ಆರ್ಥಿಕತೆಯ ಇಂಗಾಲದ ತೀವ್ರತೆಯನ್ನು 45% ರಷ್ಟು ಕಡಿಮೆಗೊಳಿಸುವುದು.
* 2070ರ ವೇಳೆಗೆ ಶೂನ್ಯ ಇಂಗಾಲ ಹೊರಸೂಸುವಿಕೆಯ ಗುರಿಯನ್ನು ಸಾಧಿಸುವುದು.