ಕಾಮಗಾರಿ ನಡೆಯದೇ ಬಿಲ್ ತೋರಿಸಿದ್ದು ಯಾಕೆ: ಸುಳ್ಳು ಹೇಳಿದ ಅಧಿಕಾರಿಗಳಿಗೆ ಸಚಿವ ಹೆಗ್ಡೆಯಿಂದ ಕ್ಲಾಸ್

Public TV
1 Min Read
KWR ANANTH KUMAR HEGADE

ಕಾರವಾರ: ತಮ್ಮ ಅವಧಿಯ ಅನುದಾನದ ಕಾಮಗಾರಿಗಳನ್ನು ಪ್ರಾರಂಭಿಸದೇ ಸುಳ್ಳು ನೆಪ ಹೇಳುತ್ತಿದ್ದ ಅಧಿಕಾರಿಗಳಿಗೆ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗ್ಡೆ ತರಾಟೆಗೆ ತಗೆದುಕೊಂಡಿದ್ದಾರೆ.

ಕಾರವಾರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮೂಲಸೌಕರ್ಯ ಯೋಜನೆಗಳ ವಿಚಕ್ಷಣ ಸಮಿತಿ ಸಭೆಯಲ್ಲಿ ಮಾತನಾಡಿದ ಸಂಸದರು, ನಿಮ್ಮ ಬೇಜವಾಬ್ದಾರಿ ಹಾಗೂ ನಿರ್ಲಕ್ಷದಿಂದ ಕಾಮಗಾರಿ ಪ್ರಾರಂಭವಾಗುತ್ತಿಲ್ಲ. ಸರ್ಕಾರಿ ಕೆಲಸ ಅಂದರೆ ಆಟ ಆಡುವುದು ಅಂದುಕೊಂಡಿದ್ದಿರಾ. ನನಗೆ ಸೂಕ್ತ ಮಾಹಿತಿ ನೀಡದೇ ಇಂದು ಕಾರವಾರದಿಂದ ಹೋಗುವಂತಿಲ್ಲ ಎಂದು ಖಡಕ್ ಆಗಿ ಸೂಚಿಸಿದರು.

KWR ANANTH KUMAR HEGADE 2

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ 851 ವಿವಿಧ ಕಾಮಗಾರಿಗಳಲ್ಲಿ 838 ಕಾಮಗಾರಿಗಳು ಮಂಜೂರಾಗಿವೆ. ಅದರಲ್ಲಿ 796 ಕಾಮಗಾರಿಗಳಿಗೆ ಅನುಮೋದನೆ ದೊರತಿದೆ. 2012-13ರ ಅವಧಿಯಲ್ಲಿಯೇ ಅನುಮೋದನೆಗೊಂಡಿದ್ದ 55 ಕಾಮಗಾರಿಗಳು ಇಂದಿಗೂ ಪ್ರಾರಂಭಗೊಂಡಿಲ್ಲ ಯಾಕೆ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು.

ಅನುಮೋಧನೆಗೊಂಡ ಕಾಮಗಾರಿಗಳಲ್ಲಿ ರಸ್ತೆ ಬದಲಿಗೆ ಚರಂಡಿಯನ್ನು ನಿರ್ಮಿಸಿ ಅಧಿಕಾರಿಗಳು ಬಿಲ್ ಮಾಡಿಕೊಂಡಿದ್ದಾರೆ. ಬೈಲಹೊಂಗಲ ಹಾಗೂ ಖಾನಾಪುರದ ಜಿಲ್ಲಾ ಪಂಚಾಯತ್ ಎಂಜಿನಿಯರ್ ಗಳು ಅನುಮೋದನೆಗೊಂಡ 37 ಕಾಮಗಾರಿಗಳಲ್ಲಿ 34 ಕಾಮಗಾರಿಗಳನ್ನು ಪ್ರಾರಂಭವೇ ಮಾಡಿಲ್ಲ. ಇನ್ನು ನಾಲ್ಕು ವರ್ಷದ ಸಂಸದ ಅವಧಿಯಲ್ಲಿ ಕೇವಲ ನಾಲ್ಕು ಕಾಮಗಾರಿಗಳನ್ನು ಮಾತ್ರ ಮುಗಿಸಿದ್ದು ಉಳಿದ ಕಾಮಗಾರಿಗಳ ಯಾವಾಗ ಪೂರ್ಣಗೊಳ್ಳುತ್ತವೆ ಎಂದು ಅಧಿಕಾರಿಗಳನ್ನು ಅನಂತ್ ಕುಮಾರ್ ಹೆಗ್ಡೆ ಖರವಾಗಿ ಪ್ರಶ್ನಿಸಿದರು.

KWR ANANTH KUMAR HEGADE 1

ಸಚಿವರು ಪ್ರಶ್ನೆಗಳಿಗೆ ಬೈಲಹೊಂಗಲ ಹಾಗೂ ಖಾನಾಪುರದ ಜಿಲ್ಲಾ ಪಂಚಾಯತ್ ಸಹಾಯಕ ಎಂಜಿನಿಯರ್ ಗಳಾದ ಜಿ.ಎಸ್.ಪಾಟೀಲ್, ಆರ್.ವಿ.ಚತುವಾಡಿಗಿ ಅವರು ಉತ್ತರ ನೀಡಲು ತಡಕಾಡಿದರು. ಇದರಿಂದ ಕೋಪಗೊಂಡ ಸಚಿವರು ಸಭೆಯಿಂದ ಹೊರ ನಡೆದು, ಮಾಹಿತಿ ತರುವಂತೆ ಸೂಚಿಸಿದರು. ಇದಲ್ಲದೇ ಕೆನರಾ ಲೋಕಸಭಾ ಕ್ಷೇತ್ರದ ಸಾಕಷ್ಟು ಕಾಮಗಾರಿಗಳಲ್ಲಿ ಕೆಲಸವೇ ಪ್ರಾರಂಭವಾಗಿಲ್ಲ. ಕೆಲವರು ಹಳೇ ಕಟ್ಟಡಗಳ ಫೋಟೋ ತೋರಿಸಿ ಬಿಲ್ ಮಾಡಿಕೊಂಡಿದ್ದಾರೆ ಎಂದು ಹೇಳಿ, ಸಮರ್ಪಕ ಉತ್ತರ ನೀಡುವವರಗೂ ಕಾರವಾರದಿಂದ ತೆರಳದಂತೆ ಅಧಿಕಾರಿಗಳಿಗೆ ಸೂಚಿಸಿದರು.

Share This Article
Leave a Comment

Leave a Reply

Your email address will not be published. Required fields are marked *