ಬೆಂಗಳೂರು: ಕಳೆದ ಅಧಿವೇಶನದಲ್ಲಿ ಸದನದಿಂದ ಅಮಾನತ್ತಾದ ಬಿಜೆಪಿಯ 18 ಶಾಸಕರಿಗೆ ಕೊನೆಗೂ ಸಂಡೇ ಸ್ಪೆಷಲ್ ರೂಪದಲ್ಲಿ ಗುಡ್‌ನ್ಯೂಸ್ ಸಿಕ್ಕಿದೆ. 2 ತಿಂಗಳ ನಂತರ ಶಾಸಕರ ಅಮಾನತು ಆದೇಶ ವಾಪಸ್ ಪಡೆಯಲಾಗಿದೆ. ಇಂದು ಸಂಜೆ ವಿಧಾನಸೌಧದಲ್ಲಿ ಸ್ಪೀಕರ್ ನೇತೃತ್ವದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ, ಕಾನೂನು ಸಚಿವ ಹೆಚ್.ಕೆ ಪಾಟೀಲ್, ವಿಪಕ್ಷ ನಾಯಕ ಆರ್. ಅಶೋಕ್ ಸಭೆ ನಡೆಸಿ ಅಮಾನತು ಆದೇಶ ವಾಪಸ್ ಪಡೆಯುವ ನಿರ್ಣಯ ಮಾಡಲಾಯ್ತು.
ಕಳೆದ ಮಾ.21 ರಂದು ಸದನದಲ್ಲಿ ಹನಿಟ್ರ್ಯಾಪ್ ಪ್ರಕರಣ ಮುಂದಿಟ್ಕೊಂಡು ಬಿಜೆಪಿ ಶಾಸಕರು ಪ್ರತಿಭಟನೆ ನಡೆಸಿದ್ರು. ಈ ವೇಳೆ ಸ್ಪೀಕರ್ ಪೀಠಕ್ಕೆ ಅಗೌರವ ತೋರಿದ್ದಾರೆಂಬ ಕಾರಣಕ್ಕೆ, ಬಿಜೆಪಿಯ 18 ಶಾಸಕರನ್ನ ಸ್ಪೀಕರ್ ಯು.ಟಿ ಖಾದರ್ 6 ತಿಂಗಳ ಕಾಲ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದರು. ಈ ಸಂಬಂಧ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ರು. ಆದೇಶ ವಾಪಸ್‌ಗೆ ಆಗ್ರಹಿಸಿ ಸ್ಪೀಕರ್‌ಗೆ ಪತ್ರ ಬರೆದಿದ್ರು. ರಾಜ್ಯಪಾಲರಿಗೂ ದೂರು ಕೊಟ್ಟಿದ್ರು. ಕೋರ್ಟ್ ಮೆಟ್ಟಲೇರಲು ಮುಂದಾಗಿದ್ರು. ಸಾಕಷ್ಟು ಒತ್ತಡ ಸೃಷ್ಟಿಯಾದ ಹಿನ್ನೆಲೆಯಲ್ಲಿ ಕಳೆದ ಸಚಿವ ಸಂಪುಟ ಸಭೆಯಲ್ಲಿ ಅಮಾನತು ಆದೇಶ ವಾಪಸ್‌ಗೆ ಒಲವು ವ್ಯಕ್ತವಾಯಿತು. ಇಂದು ಸರ್ಕಾರದ ಜತೆ ಚರ್ಚಿಸಿ ಸ್ಪೀಕರ್ ಖಾದರ್ ತಮ್ಮ ವಿವೇಚನಾಧಿಕಾರ ಬಳಸಿ ಅಮಾನತು ಆದೇಶ ವಾಪಸ್ ಪಡೆದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅಶೋಕ್, ನಾಳೆ (ಸೋಮವಾರ) ಸ್ಪೀಕರ್ ಅವರು ಹಜ್ ಯಾತ್ರೆಗೆ ಹೋಗಲಿದ್ದಾರೆ. ಅದ್ದರಿಂದ ನಾಳೆ ಸ್ಪೀಕರ್ ಅಧಿಕಾರಿಗಳ ಸಭೆ ಕರೆದು ಆದೇಶ ಹೊರಡಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಅಮಾನತುಗೊಂಡಿದ್ದ ಶಾಸಕರು
1. ಅಶ್ವಥ್ ನಾರಾಯಣ, ಮಲ್ಲೇಶ್ವರ
2. ಎಸ್.ಆರ್ ವಿಶ್ವನಾಥ್, ಯಲಹಂಕ
3. ಮುನಿರತ್ನ, ಆರ್‍ಆರ್ ನಗರ
4. ಬೈರತಿ ಬಸವರಾಜು, ಕೆಆರ್ ಪುರ
5. ಸುರೇಶ್ ಗೌಡ, ತುಮಕೂರು ಗ್ರಾ.
6. ಚನ್ನಬಸಪ್ಪ, ಶಿವಮೊಗ್ಗ
7. ಸಿ.ಕೆ. ರಾಮಮೂರ್ತಿ, ಜಯನಗರ
8. ಧೀರಜ್ ಮುನಿರಾಜು, ದೊಡ್ಡಬಳ್ಳಾಪುರ
9. ಬಿ.ಪಿ. ಹರೀಶ್, ಹರಿಹರ
10. ಯಶ್ಪಾಲ್ ಸುವರ್ಣ, ಉಡುಪಿ
11. ಭರತ್ ಶೆಟ್ಟಿ, ಮಂಗಳೂರು
12. ಉಮಾನಾಥ್ ಕೋಟ್ಯಾನ್, ಮೂಡುಬಿದರೆ
13. ಎಂ.ಆರ್ ಪಾಟೀಲ್, ಕುಂದಗೋಳ
14. ಶೈಲೇಂದ್ರ ಬೆಲ್ದಾಳೆ, ಬೀದರ್ ದಕ್ಷಿಣ
15. ಶರಣು ಸಲಗಾರ್, ಬಸವಕಲ್ಯಾಣ
16. ಬಸವರಾಜ ಮತ್ತಿಮೂಡ್, ಕಲಬುರಗಿ ಗ್ರಾ.
17. ಚಂದ್ರು ಲಮಾಣಿ, ಶಿರಹಟ್ಟಿ
18. ದೊಡ್ಡನಗೌಡ ಪಾಟೀಲ್, ಕುಷ್ಟಗಿ
ಅಮಾನತು ಅವಧಿಯಲ್ಲಿ ಏನೆಲ್ಲ ನಿಷಿದ್ಧ ಆಗಿತ್ತು?
* ಅಮಾನತು ಅವಧಿಯಲ್ಲಿ ಶಾಸಕರು ವಿಧಾನಸಭೆಯ ಸಭಾಂಗಣ, ಲಾಬಿ ಮತ್ತು ಗ್ಯಾಲರಿಗಳಿಗೆ ಪ್ರವೇಶಿಸುವಂತಿರಲಿಲ್ಲ.
* ಅಮಾನತುಗೊಂಡ ಸದಸ್ಯರಾಗಿರುವ ವಿಧಾನಮಂಡಲದ/ವಿಧಾನ ಸಭೆಯ ಸ್ಥಾಯಿ ಸಮಿತಿಗಳ ಸಭೆಗಳಲ್ಲಿಯೂ ಭಾಗವಹಿಸುವಂತಿರಲಿಲ್ಲ.
* ವಿಧಾನಸಭೆಯ ಕಾರ್ಯಕಲಾಪಗಳ ಪಟ್ಟಿಯಲ್ಲಿ ಅವರುಗಳ ಹೆಸರಿನಲ್ಲಿ ಯಾವುದೇ ವಿಷಯವನ್ನು ನಮೂದು ಮಾಡುವಂತಿರಲ್ಲ.
* ಅಮಾನತ್ತಿನ ಅವಧಿಯಲ್ಲಿ ಶಾಸಕರು ನೀಡುವ ಯಾವುದೇ ಸೂಚನೆಗಳನ್ನು ಸ್ವೀಕರಿಸಲಾಗುವುದಿಲ್ಲ.
* ಅಮಾನತ್ತಿನ ಅವಧಿಯಲ್ಲಿ ನಡೆಯುವ ಸಮಿತಿಗಳ ಚುನಾವಣೆಯಲ್ಲಿ ಶಾಸಕರು ಮತದಾನ ಮಾಡುವಂತಿರಲಿಲ್ಲ.
* ಅಮಾನತ್ತಿನ ಅವಧಿಯಲ್ಲಿ ಶಾಸಕರು ಯಾವುದೇ ದಿನ ಭತ್ಯೆಯನ್ನು ಪಡೆಯಲು ಅರ್ಹರಿರಲಿಲ್ಲ.