ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಆಶೀರ್ವಾದಿಂದ ನಾನು ಗೃಹಸಚಿವನಾಗಿದ್ದೇನೆ ಎಂದು ಅರಗ ಜ್ಞಾನೇಂದ್ರ ಹೇಳಿದ್ದಾರೆ.
ಸಂಸದ ಬಿ.ವೈ ರಾಘವೇಂದ್ರ ಅವರ ಹುಟ್ಟುಹಬ್ಬದ ದಿನದಂದೇ ಗೃಹ ಸಚಿವ ಅರಗ ಜ್ಞಾನೇಂದ್ರರಿಗೆ ಪೌರ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಸಂಸದ ಬಿ.ವೈ ರಾಘವೇಂದ್ರರನ್ನು ಗೃಹ ಸಚಿವರು ಹಾಡಿ ಹೊಗಳಿದ್ದಾರೆ.
ಜಿಲ್ಲೆಯ ಶಿಕಾರಿಪುರದಲ್ಲಿ ಇಂದು ಪುರಸಭೆ ವತಿಯಿಂದ ನೀಡಲಾದ ಪೌರ ಸನ್ಮಾನ ಸ್ವೀಕರಿಸಿ ಮಾತನಾಡಿದ ಗೃಹ ಸಚಿವರು, ಯಡಿಯೂರಪ್ಪ ಕುಟುಂಬದೊಂದಿಗೆ ಹಿಂದಿನಿಂದಲೂ ನನಗೆ ಅವಿನಾಭಾವ ಸಂಬಂಧವಿದೆ. 1983ರಲ್ಲಿ ಯಡಿಯೂರಪ್ಪ ಶಿಕಾರಿಪುರದಿಂದ, ನಾನು ತೀರ್ಥಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಿದ್ದೆ. ಅಂದಿನ ಚುನಾವಣೆಯಲ್ಲಿ ನಾನು ರಿವರ್ಸ್ ಗೇರ್ ಇಲ್ಲದ ಕಾರಿನಲ್ಲಿ ಪ್ರಚಾರ ಮಾಡಿ ಎರಡು ಸಾವಿರ ಮತಗಳಿಂದ ಸೋತಿದ್ದೆ. ಅಂದು ಸ್ವಲ್ಪ ಪ್ರಯತ್ನಿಸಿದ್ದರೆ, ಯಡಿಯೂರಪ್ಪ ಅವರೊಂದಿಗೆ ನಾನು ಶಾಸಕನಾಗುತ್ತಿದ್ದೆ. 9 ಸಾರಿ ಚುನಾವಣೆಗೆ ಸ್ಪರ್ಧಿಸಿ, ನಾಲ್ಕು ಬಾರಿ ಗೆದ್ದಿದ್ದೇನೆ ಎಂದರು. ಇದನ್ನೂ ಓದಿ:
ಸಿದ್ದರಾಮಯ್ಯನವರು ಕನಸಿನ ಲೋಕದಲ್ಲಿದ್ದಾರೆ: ಬಿ.ಸಿ ಪಾಟೀಲ್
ಯಡಿಯೂರಪ್ಪನವರ ಆಶೀರ್ವಾದ, ಬೊಮ್ಮಾಯಿ ಅವರ ಸಹಕಾರದಿಂದ ಹಾಗೂ ಪಕ್ಷದ ಹಿರಿಯರ ಆಶೀರ್ವಾದದಿಂದ ಸರ್ಕಾರದಲ್ಲಿ ಅತ್ಯಂತ ಮಹತ್ವದ ಹುದ್ದೆಯಾದ ಗೃಹ ಸಚಿವನಾಗಿದ್ದೇನೆ ಎಂದು ಅರಗ ಹೇಳಿದ್ದಾರೆ. ಅಲ್ಲದೇ ಮುಂದಿನ ದಿನಗಳಲ್ಲಿ ರಾಜ್ಯ ಹಾಗೂ ಜಿಲ್ಲೆಯ ಅಭಿವೃದ್ಧಿಗೆ ನಿರಂತರವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.