– ಶಾರದಾದೇವಿಯ ದೇವಾಲಯ ಪುನರುತ್ಥಾನ
-ಕಾಶ್ಮೀರದ ಮಂಜಿನಲ್ಲಿ ತಣ್ಣಗೆ ನಿಂತ ಮಂದಿರಗಳು
ಜಮ್ಮು ಮತ್ತು ಕಾಶ್ಮೀರಕ್ಕೆ (Jammu and Kashmir) ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಆರ್ಟಿಕಲ್ 370 ರದ್ದಾದ ಬಳಿಕ ರಾಜ್ಯದಲ್ಲಿ ಹಲವಾರು ಬದಲಾವಣೆಗಳ ಗಾಳಿ ಬೀಸಿದೆ. ಸರ್ವಧರ್ಮಗಳ ಕೇಂದ್ರಗಳ ಅಭಿವೃದ್ಧಿ, ದೇವಾಲಯಗಳ ಅಭಿವೃದ್ಧಿಗೆ ಅಲ್ಲಿನ ಸರ್ಕಾರ ಗಮನ ಹರಿಸಿದೆ. ಮುಸ್ಲಿಂ ದೊರೆ ಸಿಕಂದರ್ ಶಾ ಮಿರಿಯ ಕಾಲದಲ್ಲಿ ತೀವ್ರ ಹಾನಿಗೊಳಗಾದ ದಕ್ಷಿಣ ಕಾಶ್ಮೀರದ ಅನಂತನಾಗ್‌ನಲ್ಲಿರುವ 8ನೇ ಶತಮಾನದ ಮಾರ್ತಾಂಡ ಸೂರ್ಯ ದೇವಾಲಯವನ್ನು ಪುನರುತ್ಥಾನ ಮಾಡಲು ಸರ್ಕಾರ ಸಿದ್ಧತೆ ನಡೆಸಿದೆ. ಮಾರ್ತಾಂಡ ಸೂರ್ಯ ದೇಗುಲದ ಆವರಣದಲ್ಲಿ ದೇಗುಲದ ನಿರ್ಮಾತೃ ಚಕ್ರವರ್ತಿ ಲಲಿತಾದಿತ್ಯ ಮುಕ್ತಪೀಡರ ಪ್ರತಿಮೆ ಸ್ಥಾಪಿಸುವ ಕುರಿತು ಚರ್ಚೆ ಸಹ ನಡೆದಿದೆ. ಕಾಶ್ಮೀರದ ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಯನ್ನು ಉಳಿಸುವ ಈ ದೇವಾಲಯವನ್ನು ಸಂರಕ್ಷಿಸುವ ಉದ್ದೇಶವಾಗಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
Advertisement
ಮಾರ್ತಾಂಡ ಸೂರ್ಯ ದೇವಾಲಯದ ಇತಿಹಾಸ
ಆರ್ಕಿಯಲಾಜಿಕಲ್ ಸರ್ವೆ ಆಫ್ ಇಂಡಿಯಾ (ASI) ಅಡಿಯಲ್ಲಿ ಸಂರಕ್ಷಿತವಾಗಿರುವ ಈ ದೇವಾಲಯವು ಅತ್ಯಂತ ಹಳೆಯ ಸೂರ್ಯ ದೇವಾಲಯವಾಗಿದೆ. ಇದು ಹಿಂದೂ ಧರ್ಮದ ಮುಖ್ಯ ಸೌರ ದೇವತೆಯಾದ ಸೂರ್ಯನ ದೇವಾಲಯವಾಗಿದ್ದು, ಸೂರ್ಯನನ್ನು ಸಂಸ್ಕೃತ ಭಾಷೆಯ ಸಮಾನಾರ್ಥಕ ಮಾರ್ತಾಂಡ ಎಂದು ಕರೆಯಲಾಗುತ್ತದೆ.
Advertisement
Advertisement
ಕಾರ್ಕೋಟ ರಾಜವಂಶಕ್ಕೆ ಸೇರಿದ ರಾಜ ಲಲಿತಾದಿತ್ಯ ಮುಕ್ತಾಪಿಡ 8 ನೇ ಶತಮಾನದಲ್ಲಿ ಸೂರ್ಯ ದೇವಾಲಯವನ್ನು ನಿರ್ಮಿಸಿದ. ಇದು ಶ್ರೀಮಂತವಾದ ಕಾಶ್ಮೀರಿ ವಾಸ್ತುಶಿಲ್ಪವನ್ನು ಪ್ರತಿನಿಧಿಸುತ್ತದೆ. ರಾಜತರಂಗಿಣಿಯಲ್ಲಿ, ಇತಿಹಾಸಕಾರ ಕಲ್ಹಣನು, ಲಲಿತಾದಿತ್ಯನ ಆಳ್ವಿಕೆಯನ್ನು ಹಾಗೂ ಈ ಪ್ರದೇಶದಲ್ಲಿ ಸಮೃದ್ಧಿ ಮತ್ತು ಸಾಂಸ್ಕೃತಿಕ ಪ್ರವರ್ಧಮಾನದ ಅವಧಿ ಎಂದು ಉಲ್ಲೇಖಿಸಿದ್ದಾನೆ.
Advertisement
1389 ಮತ್ತು 1413ರ ನಡುವಿನ ಅವಧಿಯಲ್ಲಿ ಸಿಕಂದರ್ ಶಾ ಮಿರಿಯ ಆಳ್ವಿಕೆಯಲ್ಲಿ ಇದು ನಾಶವಾಯಿತು ಎಂದು ಹೇಳಲಾಗುತ್ತದೆ. ಸುಮಾರು ಒಂದು ವರ್ಷಗಳ ಕಾಲ ಆತನ ಸೈನಿಕರು ಈ ದೇವಾಲಯ ಹಾಳುಗೆಡವಲು ಸಮಯ ತೆಗೆದುಕೊಂಡಿದ್ದಾರೆ. ಆತ ಮುಸ್ಲಿಮೇತರ ದೇವಸ್ಥಾನಗಳ ಮೇಲಿನ ಆಕ್ರಮಣಕ್ಕಾಗಿ ಮಧ್ಯಕಾಲೀನ ಇಸ್ಲಾಮಿಸ್ಟ್‌ಗಳಿಂದ ‘ಸಿಕಂದರ್ ಬುಟ್ಶಿಕನ್’ (ವಿಗ್ರಹ ಭಂಜಕ) ಎಂಬ ಬಿರುದನ್ನು ಆತ ಗಳಿಸಿದ್ದ.
ದೇವಾಲಯದ ವಾಸ್ತುಶಿಲ್ಪ
ಮಾರ್ತಾಂಡ ಸೂರ್ಯ ದೇವಾಲಯ (Martand Sun Temple) ಸಮುದ್ರ ಮಟ್ಟದಿಂದ 5,400 ಅಡಿ ಎತ್ತರದಲ್ಲಿದೆ. ಇದು ಸೂರ್ಯನ ಕಿರಣಗಳು ದಿನವಿಡೀ ಸೂರ್ಯನ ವಿಗ್ರಹದ ಮೇಲೆ ಬೀಳುವಂತೆ ದೇವಾಲಯವನ್ನು ನಿಮಿಸಲಾಗಿದೆ. ಬೂದು ಕಲ್ಲಿನ ಗೋಡೆಗಳು, ನದಿ ನೀರಿನಿಂದ ತುಂಬಿದ ಅಂಗಳ, ಈಜಿಪ್ಟಿನ ದೇವಾಲಯ ಮತ್ತು ಗ್ರೀಸ್‌ನ ವಾಸ್ತುಶಿಲ್ಪದ ಪ್ರಭಾವ ಇದರ ಮೇಲಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ASI ಪುರಾವೆಗಳ ಪ್ರಕಾರ ಗಾಂಧಾರ, ಗುಪ್ತ ಮತ್ತು ಚೈನೀಸ್ ಶೈಲಿಗಳ ಮಿಶ್ರಣವನ್ನು ಹೊಂದಿದೆ. ದೇವಾಲಯದ ವಾಸ್ತುಶಿಲ್ಪದ ಮೇಲೆ ಗ್ರೀಕ್ ಪ್ರಭಾವ ಹೆಚ್ಚಾಗಿದೆ.
ದೇವಾಲಯದ ಸುತ್ತಲೂ 84 ಸಣ್ಣ ದೇವಾಲಯಗಳನ್ನು ಹೊಂದಿದೆ. ಇದು 220 ಅಡಿ ಉದ್ದ ಮತ್ತು 142 ಅಗಲವನ್ನು ಹೊಂದಿವೆ. ಪ್ರಾಚೀನ ಹಿಂದೂ ದೇವಾಲಯದ ವಾಸ್ತುಶಿಲ್ಪಕ್ಕೆ ಅನುಗುಣವಾಗಿ ಪಶ್ಚಿಮ ಭಾಗದಲ್ಲಿ ಪ್ರಾಥಮಿಕ ಪ್ರವೇಶದ್ವಾರವಿದೆ. ದೇವಾಲಯದ ರಚನೆಯು ಸ್ತಂಭಗಳು, ಆಯತ ಮತ್ತು ತ್ರಿಕೋನಗಳ ಒಂದೇ ರೀತಿಯ ಮತ್ತು ಪುನರಾವರ್ತಿತ ಮಾದರಿಗಳು, ಗೋಡೆಗಳ ಮೇಲೆ ಕೆತ್ತಿದ ದೇವರ ಚಿತ್ರಗಳು ಮತ್ತು ಗ್ರೀಕ್ ಪ್ರತಿಬಿಂಬಿಸುವ ವಾಸ್ತುಶಿಲ್ಪದ ಅಂಶಗಳನ್ನು ಹೊಂದಿದೆ. ಕಾಶ್ಮೀರದ ಶೀತ ಹವಾಮಾನವನ್ನು ಸರಿಹೊಂದಿಸಲು ದೇವಾಲಯಕ್ಕೆ ಕಾಶ್ಮೀರಿ ಕಲ್ಲುಗಳನ್ನೇ ಬಳಸಲಾಗಿದೆ.
ಹಲವಾರು ಮೂರು ಮುಖದ ವಿಷ್ಣು ದೇವರ ವಿಗ್ರಹಗಳು ಮತ್ತು ಕೆಲವು ಚತುರ್ಭುಜ ವಿಷ್ಣು ಶಿಲ್ಪಗಳು ದೇವಾಲಯದ ಹೊರಾಂಗಣದಲ್ಲಿ ಸುಂದರವಾಗಿ ಕೆತ್ತಲ್ಪಟ್ಟಿವೆ. ಸೂರ್ಯ ದೇವಾಲಯದ ಹಾಲ್‌ನ ಪೂರ್ವ ಗೋಡೆಯ ಬಲ ಹಲಗೆಯಲ್ಲಿ ಎಚ್ಚರಿಕೆಯಿಂದ ಕೆತ್ತಿದ ಅರುಣನ ಆಕೃತಿಯನ್ನು ಈಗಲೂ ಕಾಣಬಹುದು.
ಭಾರತ-ಪಾಕ್ ಗಡಿಯಲ್ಲಿ ಶಾರದಾದೇವಿಯ ದೇಗುಲ ಪುನರ್ ನಿರ್ಮಾಣ
ಉತ್ತರ ಕಾಶ್ಮೀರದ ಗಡಿಭಾಗವಾದ ಕುಪ್ವಾರ ಜಿಲ್ಲೆಯ ಟೀತ್ವಾಲ್ ಪ್ರದೇಶದಲ್ಲಿ ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಬಳಿ ಹೊಸದಾಗಿ ನಿರ್ಮಿಸಲಾದ ಶಾರದಾ ದೇವಸ್ಥಾನದಲ್ಲಿ (Kashmir Ancient Shri Sharada Temple) ಶಾರದಾ ದೇವಿಯ ವಿಗ್ರಹವನ್ನು ಗರ್ಭಗುಡಿಯಲ್ಲಿ ಈಗಾಗಲೇ ಇರಿಸಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ದೇವಾಲಯವನ್ನು ಉದ್ಘಾಟಿಸಿದ್ದಾರೆ.
ಈ ದೇವಾಲಯದ ವಾಸ್ತುಶಿಲ್ಪ ಮತ್ತು ನಿರ್ಮಾಣವನ್ನು ಪೌರಾಣಿಕ ಗ್ರಂಥಗಳ ಪ್ರಕಾರ ಶಾರದಾ ಪೀಠದ ಆಶ್ರಯದಲ್ಲಿ ಮಾಡಲಾಗಿದೆ. ಶಾರದಾ ಮಾತೆ ನಾಗರೀಕತೆಯ ಆವಿಷ್ಕಾರ ಮತ್ತು ಶಾರದಾ ಲಿಪಿಯ ಪ್ರಚಾರದ ದಿಕ್ಕಿನಲ್ಲಿ ಕುಪ್ವಾರದಲ್ಲಿರುವ ಮಾ ಶಾರದಾ ದೇವಾಲಯದ ಪುನರ್ನಿರ್ಮಾಣ ಅಗತ್ಯವಾಗಿತ್ತು ಎಂದು ಉದ್ಘಾಟನೆ ವೇಳೆ ಶಾ ಅಭಿಪ್ರಾಯ ಪಟ್ಟಿದ್ದರು.
ಒಂದು ಕಾಲದಲ್ಲಿ ಶಾರದಾ ಪೀಠವನ್ನು ಭಾರತದಲ್ಲಿ ಜ್ಞಾನದ ಕೇಂದ್ರವೆಂದು ಪರಿಗಣಿಸಲಾಗಿತ್ತು. ದೇಶಾದ್ಯಂತದ ವಿದ್ವಾಂಸರು, ಧರ್ಮಗ್ರಂಥಗಳು ಮತ್ತು ಆಧ್ಯಾತ್ಮಿಕ ಜ್ಞಾನಕ್ಕಾಗಿ ಹುಡುಕಲು ಇಲ್ಲಿಗೆ ಬರುತ್ತಿದ್ದರು. ಶಾರದಾ ಪೀಠವು ಭಾರತದ ಸಾಂಸ್ಕೃತಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಪರಂಪರೆಯ ಐತಿಹಾಸಿಕ ಕೇಂದ್ರವಾಗಿದೆ.
ಶಾರದೆಯ ಪುರಾತನ ದೇವಾಲಯವು 18 ಮಹಾ ಶಕ್ತಿ ಪೀಠಗಳಲ್ಲಿ ಒಂದಾಗಿದ್ದು, ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ನೀಲಂ ಕಣಿವೆಯಲ್ಲಿ ಪಾಳು ಬಿದ್ದಿದ್ದು, ದೇವಾಲಯದ ಮೂಲವನ್ನು ಗುರುತಿಸಲು ಹೆಚ್ಚಿನ ಪುರಾವೆಗಳಿಲ್ಲದಿದ್ದರೂ ಸಹ, ಇದನ್ನು 1 ನೇ ಶತಮಾನದ ಆರಂಭದಲ್ಲಿ ಕುಶಾನ್ ಸಾಮ್ರಾಜ್ಯದ ಸಮಯದಲ್ಲಿ ನಿರ್ಮಿಸಲಾಗಿದೆ ಎಂದು ನಂಬಲಾಗಿದೆ.
ಕಾಶ್ಮೀರದಲ್ಲಿರುವ ಇನ್ನಿತರ ಪ್ರಮುಖ ದೇವಾಲಯಗಳು ಯಾವುದು?
ಶಂಕರಾಚಾರ್ಯ ದೇವಾಲಯ
ಈ ದೇವಾಲಯಕ್ಕೆ ಗೋಪಾದ್ರಿ ಎಂಬ ಹೆಸರಿತ್ತು. 9ನೇ ಶತಮಾನದಲ್ಲಿ ಆದಿಗುರು ಶಂಕರಾಚಾರ್ಯರು ಕಾಶ್ಮೀರಕ್ಕೆ ಭೇಟಿ ಕೊಟ್ಟಾಗ ಈ ಬೆಟ್ಟದ ಮೇಲೆ ಉಳಿದಿದ್ದರು. ನಂತರ ಇಲ್ಲಿಗೆ ಶಂಕರಾಚಾರ್ಯ ದೇವಾಲಯ ಎಂಬ ಹೆಸರು ಬಂದಿದೆ. ಈ ದೇವಾಲಯವನ್ನು ಕ್ರಿ.ಪೂ 371 ರಲ್ಲಿ ರಾಜ ಗೋಪದಾಟ್ಯ ಕಟ್ಟಿಸಿದ ಎಂದು ಕಲ್ಹಣ ಪುಸ್ತಕದಲ್ಲಿದೆ. ಆ ಸಂದರ್ಭದಲ್ಲಿ ಶಂಕರಾಚಾರ್ಯರು ಜಮ್ಮು ಹಾಗೂ ಕಾಶ್ಮೀರದಲ್ಲಿ ಶಿವನ ಆರಾಧನೆ ಹೆಚ್ಚಲು ಕಾರಣರಾಗಿದ್ದರು. ಮಹಾರಾಜ ಗುಲಾಬ್ ಸಿಂಗ್ ಈ ಬೆಟ್ಟಕ್ಕೆ ಮೆಟ್ಟಿಲುಗಳನ್ನು ಕಟ್ಟಿಸಿದ್ದಾನೆ.
ಪಂಡ್ರೆತನ್ ದೇವಾಲಯ
ಸ್ಥಳೀಯವಾಗಿ ಈ ದೇವಾಲಯವನ್ನು ಪಾನಿ ಮಂದಿರ ಎನ್ನಲಾಗುತ್ತದೆ. ಇದು ಶ್ರೀನಗರದಿಂದ 5 ಕಿಲೋಮೀಟರ್ ದೂರದಲ್ಲಿದೆ. ವಿಷ್ಣುವಿನ ದೇವಾಲಯವಾದ ಇದನ್ನು ಮೇರು ವರ್ಧನ ಎಂಬ ರಾಜ ಕಟ್ಟಸಿದ. ದೇವಾಲಯದ ಸುತ್ತ ಕೊಳವಿದ್ದು, ಅದಕ್ಕಾಗಿ ಬಳಸಿದ ಗಣಿತ ಜ್ಞಾನಕ್ಕಾಗಿ ಪ್ರಖ್ಯಾತಿ ಪಡೆದಿದೆ.
ಪಾಯರ್ ದೇವಾಲಯ
11ನೇ ಶತಮಾನದ ಪಾಯರ್ ದೇವಾಲಯ ಶಿವನದ್ದಾಗಿದ್ದು, ಪಾಯರ್ ಎಂಬ ಹಳ್ಳಿಯಲ್ಲಿದೆ. ಪುಲ್ವಾಮಾ ಜಿಲ್ಲೆಯಲ್ಲಿರುವ ಈ ದೇವಾಲಯವನ್ನು 10 ಕಲ್ಲುಗಳಿಂದ ಕಟ್ಟಲಾಗಿದೆ.
ಶಂಕರ ಗುರುವಾರಂ ದೇವಾಲಯ
ಶಿವನ ದೇವಾಲಯವಾದ ಇದು ಬಾರಾಮುಲ್ಲಾ ಬಳಿಯಿದ್ದು, ಶಂಕರವರ್ಮಾನ್ ರಾಜ ಕಟ್ಟಿಸಿದ. ಪಾಳು ಬಿದ್ದಿರುವ ಈ ದೇವಾಲಯದಲ್ಲಿ ಈಗ ಪೂಜೆ ನಡೆಯುತ್ತಿಲ್ಲ.
ವಜ್ರ ಭೈರವ ದೇಗುಲ
ವಜ್ರ ಭೈರವ ದೇಗುಲ ಲೇಹ್‌ನಿಂದ 10 ಕಿ.ಮೀ. ದೂರದಲ್ಲಿದೆ. ಇದನ್ನು ಯಲ್ಲೋವ್ ಹ್ಯಾಟ್ ಪಂಗಡದ ರಕ್ಷಕ ತಾಂತ್ರಿಕ್ ದೇವತೆಯ ಗೌರವಾರ್ಥವಾಗಿ ನಿರ್ಮಿಸಲಾಗಿದೆ. ಸಾಮಾನ್ಯ ನಾಗರಿಕರು, ಭಕ್ತರ ದರ್ಶನಕ್ಕೆ ಇಲ್ಲಿ ವರ್ಷಕ್ಕೆ ಒಮ್ಮೆ ಮಾತ್ರ ಅವಕಾಶ ಸಿಗುತ್ತದೆ.