ಭೋಪಾಲ್: ಅಂಬುಲೆನ್ಸ್ ಸಿಗದೇ ಎಂಟು ವರ್ಷದ ಬಾಲಕ ತನ್ನ ಎರಡು ವರ್ಷದ ಕಿರಿಯ ಸಹೋದರನ ಶವವನ್ನು ಮಡಿಲ ಮೇಲೆ ಮಲಗಿಸಿಕೊಂಡು ಮಧ್ಯಪ್ರದೇಶದ ಮೊರೆನಾ ಬೀದಿ ಬದಿಯಲ್ಲಿ ಕುಳಿತುಕೊಂಡಿದ್ದ ಮನಕಲಕುವ ದೃಶ್ಯ ಕಂಡು ಬಂದಿದೆ.
ಅಂಬಾಹ್‍ನ ಬದ್ಫ್ರಾ ಗ್ರಾಮದ ನಿವಾಸಿಯಾಗಿರುವ ಬಾಲಕನ ತಂದೆ ಪೂಜಾರಾಮ್ ಜಾತವ್ ಅವರು ತಮ್ಮ ಮೃತ ಮಗನ ಶವವನ್ನು ಮನೆಗೆ ಕೊಂಡೊಯ್ಯಲು ಆಂಬ್ಯುಲೆನ್ಸ್‌ಗಾಗಿ ತೀವ್ರ ಹುಡುಕಾಡುತ್ತಿದ್ದರು. ಈ ವೇಳೆ ರಸ್ತೆಬದಿಯಲ್ಲಿ ಮೃತದೇಹವನ್ನು ಇಟ್ಟುಕೊಂಡು ಕುಳಿತಿದ್ದ ಬಾಲಕನನ್ನು ಗಮನಿಸಿದ ಜನರು ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಇದನ್ನೂ ಓದಿ: ಶ್ರೀಲಂಕಾ ಅಧ್ಯಕ್ಷರ ಮನೆಯಲ್ಲೇ ಅಡುಗೆ ಮಾಡಿ ತಿಂದ ಪ್ರತಿಭಟನಾಕಾರರು
Advertisement
Advertisement
ಇದ್ದಕ್ಕಿದ್ದಂತೆಯೇ ಪೂಜಾರಾಮ್ ಜಾತವ್ ಅವರ ಎರಡು ವರ್ಷದ ಮಗು ರಾಜನ ಆರೋಗ್ಯ ಹದಗೆಟ್ಟಿತು. ಆರಂಭದಲ್ಲಿ ಮನೆಯಲ್ಲಿಯೇ ಮಗನನ್ನು ಗುಣಪಡಿಸಲು ಪೂಜಾರಾಮ್ ಜಾತವ್ ಪ್ರಯತ್ನಿಸಿದರು. ಆದರೆ ಮಗುವಿಗೆ ಹೊಟ್ಟೆ ನೋವು ತೀವ್ರವಾಗಿದ್ದರಿಂದ, ಮೊರೆನಾ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಇದೇ ವೇಳೆ ಪೂಜಾರಾಮ್ ಜಾತವ್ ಅವರು ಹಿರಿಯ ಮಗ ಗುಲ್ಶನ್ ಕೂಡ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಮಗು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ನಂತರ ಮಗುವಿನ ಶವವನ್ನು ಗ್ರಾಮಕ್ಕೆ ಕೊಂಡೊಯ್ಯಲು ಪೂಜಾರಾಮ್ ಅವರು ಆಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸಿಕೊಡುವಂತೆ ಆಸ್ಪತ್ರೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಆದರೆ ಅಂಬುಲೆನ್ಸ್ ನೀಡಲು ಆಸ್ಪತ್ರೆ ಅಧಿಕಾರಿಗಳು ತಿರಸ್ಕರಿಸದ್ದಾರೆ.
Advertisement
Advertisement
ನಂತರ ಆಸ್ಪತ್ರೆಯಿಂದ ಹೊರಗೆ ಮಗುವಿನ ಶವ ಎತ್ತುಕೊಂಡು ಬಂದ ಪೂಜಾರಾಮ್ ಜಾತವ್ ಅವರು, ವಾಹನಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಹೊರಗಿನವರು ಕೇಳಿದಷ್ಟು ಹಣ ನೀಡಲು ಪೂಜಾರಾಮ್ ಜಾತವ್ ಅವರಿಗೆ ಸಾಧ್ಯವಾಗಲಿಲ್ಲ ಮತ್ತು ಅವರಿಗೆ ಯಾವುದೇ ವಾಹನಗಳು ಕೂಡ ಸಿಗಲಿಲ್ಲ. ಕೊನೆಗೆ ಬೇರೆ ದಾರಿ ಕಾಣದೇ, ಪೂಜಾರಾಮ್ ಜಾತವ್ ಅವರು ತಮ್ಮ ಹಿರಿಯ ಮಗ ಗುಲ್ಶನ್ ಅವರನ್ನು ಆಸ್ಪತ್ರೆಯ ಹೊರಗೆ ಶವದೊಂದಿಗೆ ಬಿಟ್ಟು ಮನೆಗೆ ಹೊರಡಲು ನಿರ್ಧರಿಸಿ ಹೋದರು. ಇದನ್ನೂ ಓದಿ: ಮೇಘಸ್ಫೋಟದಿಂದ ತಾತ್ಕಾಲಿಕ ಬಂದ್ ಆಗಿದ್ದ ಅಮರನಾಥ ಯಾತ್ರೆ ಪುನಾರಂಭ
ಗುಲ್ಶನ್ ತನ್ನ ಸತ್ತ ತಮ್ಮನ ತಲೆಯನ್ನು ತನ್ನ ಮಡಿಲಿನಲ್ಲಿ ಇಟ್ಟುಕೊಂಡು ಅರ್ಧ ಗಂಟೆಗೂ ಹೆಚ್ಚು ಕಾಲ ತಂದೆ ಹಿಂದಿರುಗುವವರೆಗೂ ಕಾಯುತ್ತಾ ಬೀದಿ ಬದಿಯಲ್ಲಿ ಕುಳಿತುಕೊಂಡಿದ್ದನು. ಈ ವೇಳೆ ಬಾಲಕನನ್ನು ಗಮನಿಸಿದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸ್ ಅಧಿಕಾರಿಗಳು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿ ಚಾಲಕನನ್ನು ಪೂಜಾರಾಮ್ ಜಾತವ್ ಅವರ ಮನೆಗೆ ತೆರಳುವಂತೆ ಸೂಚಿಸಿದ್ದಾರೆ.
ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ ಪೂಜಾರಾಮ್ ಜಾತವ್, ಮಗುವಿನ ತಾಯಿ ಮನೆಯಲ್ಲಿಲ್ಲ, ನಾನು ಬಡವ. ಏನನ್ನು ತಿಂದು ನನ್ನ ಮಗುವಿನ ಆರೋಗ್ಯ ಹದಗೆಟ್ಟಿತು ಎಂದು ನನಗೆ ಗೊತ್ತಿಲ್ಲ. ಹೀಗಾಗಿ ವೈದ್ಯರನ್ನು ಭೇಟಿ ಮಾಡಿದಾಗ ಮಗು ಮೃತಪಟ್ಟಿರುವುದಾಗಿ ತಿಳಿಸಿದರು. ಕೊನೆಗೆ ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಿಕೊಡುವಂತೆ ಅಧಿಕಾರಿಗಳಿಗೆ ಕೇಳಿದಾಗ, ವಾಹನ ವ್ಯವಸ್ಥೆಗೊಳಿಸಲು ಹಣ ಪಾವತಿಸುವಂತೆ ಕೇಳಿದರು ಎಂದು ಹೇಳಿದ್ದಾರೆ.